ADVERTISEMENT

ಚಿತ್ರಗಳಿಗೆ ಜೀವ ತುಂಬಿದರು...

ಬಾಲಶೇಖರ ಬಂದಿ
Published 20 ಮಾರ್ಚ್ 2021, 19:30 IST
Last Updated 20 ಮಾರ್ಚ್ 2021, 19:30 IST
‘ಎಳೆನೀರು‘ ಸಾಗಿಸುತ್ತಿರುವ ವ್ಯಕ್ತಿಯ ಚಿತ್ರವನ್ನು ಬೆಟಗೇರಿಯ ಗಣಪತಿ ಭಾಗೋಜಿ ಜಲವರ್ಣದಲ್ಲಿ ರಚಿಸಿದ್ದು ಹೀಗೆ
‘ಎಳೆನೀರು‘ ಸಾಗಿಸುತ್ತಿರುವ ವ್ಯಕ್ತಿಯ ಚಿತ್ರವನ್ನು ಬೆಟಗೇರಿಯ ಗಣಪತಿ ಭಾಗೋಜಿ ಜಲವರ್ಣದಲ್ಲಿ ರಚಿಸಿದ್ದು ಹೀಗೆ   

ಮೂಡಲಗಿ: ಇಲ್ಲಿನ ಮೇಘಾ ಶಾಲೆಯಲ್ಲಿ ನಡೆದ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಹಾಗೂ ಚಿತ್ರಕಲಾ ಪ್ರದರ್ಶನ ಮಕ್ಕಳಲ್ಲಿ ಚಿತ್ರಕಲೆ ಬಗ್ಗೆ ಆಸಕ್ತಿ ಕೆರಳಿಸಿತು.

ಜಲವರ್ಣ, ತೈಲವರ್ಣ, ಅಕ್ರೆಲಿಕ್‌, ಪೋಸ್ಟರ್‌ ಕಲರ್‌, ಕ್ರೆಯನ್, ಪೆನ್ಸಿಲ್‌ನಲ್ಲಿ ಮೂಡಿಬಂದ ಚಿತ್ರಗಳು ಚಿತ್ತಾಕರ್ಷಿಸಿದವು. ಬೆಟಗೇರಿಯ ಗಣಪತಿ ಭಾಗೋಜಿ ಜಲವರ್ಣದಲ್ಲಿ ಚಿತ್ರಿಸಿದ ಗ್ರಾಮೀಣ ಸೊಗಡಿನ ಚಿತ್ರಗಳು ಹಳ್ಳಿಯ ಬದುಕನ್ನು ಪರಿಚಯಿಸಿದವು. ರೈತ ರಾಶಿ ಮಾಡುವುದು, ಬಾವಿಯಿಂದ ನೀರು ಸೇದುವುದು, ಹಳ್ಳದ ಪಕ್ಕದಲ್ಲಿ ಬಟ್ಟೆ ಒಗೆಯುವುದು ಮೊದಲಾದ ದೃಶ್ಯಗಳಿಗೆ ಗಣಪತಿ ಬಣ್ಣದೊಂದಿಗೆ ಜೀವ ತುಂಬಿದ್ದರು. ಫೈನ್‌ ಆರ್ಟ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಮೈಸೂರು ದಸರಾ, ಬೆಂಗಳೂರಿನಲ್ಲಿ ಚಿತ್ರಕಲಾ ಪರಿಷತ್‌ನಿಂದ ನಡೆಯುವ ‘ಚಿತ್ರ ಸಂತೆ‘ಯಲ್ಲಿ ಪಾಲ್ಗೊಂಡು ಗಮನಸೆಳೆದಿದ್ದಾರೆ. ‘ಚಿತ್ರಕಲೆಯಲ್ಲಿಯೇ ಬೆಳೆಯುವ ನನ್ನ ಕನಸು’ ಎನ್ನುತ್ತಾರೆ.

ಮೂಡಲಗಿಯ ಎಸ್‌ಎಸ್‌ಆರ್‌ ಶಾಲೆಯ ಸುಭಾಷ ಕುರಣೆ ನಿಸರ್ಗದ ಸೊಬಗನ್ನು ಕಲಾಕೃತಿಗಳಲ್ಲಿ ಕಟ್ಟಿಕೊಟ್ಟರು. ನೈಜ ಪಕ್ಷಿಗಳಂತೆಯೇ ಕಾಣುವಂತೆ ಚಿತ್ರಿಸಿದ್ದು ಅವರ ಕುಂಚದ ಮಾಂತ್ರಿಕತೆಯಾಗಿತ್ತು. ‘ಪಕ್ಷಿಗಳ ಚಿತ್ರ ಬಿಡಿಸಬೇಕಾದರೆ ಅಲ್ಲಿ ಬೆಳಕು, ನೆರಳನ್ನು ಭಾವಚಿತ್ತವಾಗಿ ಪರಿಗಣಿಸದರೆ ಮಾತ್ರ ನೈಜತೆ ಬರುತ್ತದೆ’ ಎಂದರು. ಶೈಕ್ಷಣಿಕ ಯೋಜನೆಗಳು, ರಾಷ್ಟ್ರೀಯ ದಿನಾಚರಣೆಗಳನ್ನು ಅಕ್ಷರ ಮೂಲಕ ಚಿತ್ರಿಸಿ ಇಲಾಖೆಯಿಂದ ಅವರು ಪ್ರಶಂಸೆ ಪಡೆದಿದ್ದಾರೆ.

ADVERTISEMENT

ಇಲ್ಲಿನ ಕೆ.ಎಚ್. ಸೋನವಾಲಕರ ಸರ್ಕಾರಿ ಪ್ರೌಢಶಾಲೆಯ ಎ.ಆರ್. ಕುರುಬರ ರಚಿಸಿದ ತೈಲವರ್ಣ ಮತ್ತು ಅಕ್ರೆಲಿಕ್‌ ಕೃತಿಗಳು ಗಮನಸೆಳೆದವು. ‘ಕುಡಿತದ ದುಷ್ಟಪರಿಣಾಮ‘, ‘ಗುರುಶಿಷ್ಯ ಪರಂಪರೆ’ ಮೊದಲಾದ ಮಾಡರ್ನ್‌ ಆರ್ಟ್‌ಗಳು ಆಕರ್ಷಿಸಿದವು. ಅವರಿಗೆ 2013ರಲ್ಲಿ ‘ಅತ್ಯುತ್ತಮ ಚಿತ್ರಕಲಾ ಶಿಕ್ಷಕ’ ಪ್ರಶಸ್ತಿ ಸಿಕ್ಕಿದೆ.

ಕೊಪ್ಪದಟ್ಟಿಯ ಸರ್ಕಾರಿ ಪ್ರೌಢಶಾಲೆಯ ಭೀಮಪ್ಪ ಐ. ಬಡಿಗೇರ ವಿಜ್ಞಾನ, ಸಮಾಜ, ಗಣಿತ ವಿಷಯಾಧಾರಿತ ಕೃತಿಗಳಿಗೆ ವಿದ್ಯಾರ್ಥಿಗಳು ಮನಸೋತರು. ಕಲ್ಲೋಳಿಯ ಪಿ.ಜಿ.ಎನ್‌. ರಾಜು ಬಡೇಸ, ರಾಜಾಪುರದ ಕುಮಾರ ಕಾಂಬಳೆ, ಪಾಮಲದಿನ್ನಿಯ ನಾಮದೇವ ಕದಂ, ಮೆಳವಂಕಿಯ ಗೀತಾ ಗಾಣಿಗೇರ ಬಿಡಿಸಿದ 200 ಕಲಾಕೃತಿಗಳು ಮನಸೂರೆಗೊಳಿಸಿದವು.

ಉದ್ಘಾಟಿಸಿದ ಬಿಇಒ ಅಜಿತ ಮನ್ನಿಕೇರಿ, ಶಿಕ್ಷಕಿ ಭಾರತಿ ಸನದಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎ. ದೇವರುಷಿ ‘ಮಕ್ಕಳಲ್ಲಿ ಸೃಜನಶೀಲತೆ, ವ್ಯಕ್ತಿತ್ವ ರೂಪಿಸುವ ಶಾಲಾ ಹಂತದಲ್ಲಿ ಚಿತ್ರಕಲೆ ಉಳಿಯಬೇಕು. ಚಿತ್ರಕಲಾ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.