ADVERTISEMENT

‘ಸ್ಟ್ರಾಂಗ್‌ ರೂಂ’ಗಳಿಗೆ ಬಿಗಿ ಭದ್ರತೆ

ಬುಧವಾರದವರೆಗೂ ನಡೆದ ‘ಡಿ–ಮಸ್ಟರಿಂಗ್’ ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 15:29 IST
Last Updated 24 ಏಪ್ರಿಲ್ 2019, 15:29 IST

ಬೆಳಗಾವಿ: ಇಲ್ಲಿನ ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಬಳಸಲಾದ ಇವಿಎಂಗಳು (ವಿದ್ಯುನ್ಮಾನ ಮತಯಂತ್ರ) ಹಾಗೂ ಮತದಾನ ಖಾತ್ರಿ ಯಂತ್ರಗಳನ್ನು (ವಿವಿಪ್ಯಾಟ್) ಸ್ಟ್ರಾಂಗ್‌ ರೂಂಗಳಿಗೆ ಸಾಗಿಸಿ, ಕೊಠಡಿಗಳಿಗೆ ಸೀಲ್ ಮಾಡುವ ಪ್ರಕ್ರಿಯೆ ಗುರುವಾರ ಬೆಳಿಗ್ಗೆ 10ರವರೆಗೂ ನಡೆಯಿತು.

ತಾಲ್ಲೂಕು ಕೇಂದ್ರಗಳಿಂದ ತಡವಾಗಿ ಬಂದ ಬ್ಯಾಲೆಟ್‌ ಯುನಿಟ್‌ಗಳನ್ನು ಸ್ಟ್ರಾಂಗ್‌ರೂಂಗಳಲ್ಲಿ ಇಡಲಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇಲ್ಲಿನ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಚಿಕ್ಕೋಡಿಯ ಆರ್‌.ಡಿ. ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂಗಳನ್ನು ಸ್ಥಾಪಿಸಲಾಗಿದೆ.

ಬೆಳಗಾವಿ ಕ್ಷೇತ್ರದಲ್ಲಿ 57 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೀಗಾಗಿ, ಪ್ರತಿ ಮತಗಟ್ಟೆಯಲ್ಲಿ ತಲಾ 4 ಯಂತ್ರಗಳನ್ನು ಬಳಸಲಾಗಿದೆ. ಹೀಗಾಗಿ, ಡಿ–ಮಸ್ಟರಿಂಗ್ ಹಾಗೂ ಅವುಗಳನ್ನು ಸಾಗಿಸುವ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಯಿತು. ಚುನಾವಣಾ ವೀಕ್ಷಕರಾದ ರಾಜೀವ್ ದುಬೆ, ಜಿಲ್ಲಾ ಚುನಾವಣಾಧಿಕಾರಿ ಡಾ.ಆರ್. ವಿಶಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ. ಬೂದೆಪ್ಪ ಅವರ ಸಮ್ಮುಖದಲ್ಲಿ ಕೊಠಡಿಗಳಿಗೆ ಸೀಲ್ ಮಾಡಲಾಯಿತು.

ADVERTISEMENT

ಚಿಕ್ಕೋಡಿಯಲ್ಲಿ ವೀಕ್ಷಕರಾದ ಮಥಿವಣ್ಣನ್ ಹಾಗೂ ಅಬು ಇಬ್ರಾಮ್‌, ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕ್ರಿಯೆ ಪೂರ್ಣಗೊಳಿಸಿದರು.

ಸ್ಟ್ರಾಂಗ್‌ ರೂಂಗಳಿಗೆ ಮೂರು ಹಂತದ ಭದ್ರತೆ ಮಾಡಲಾಗಿದೆ. ಪೊಲೀಸರು, ಸಶಸ್ತ್ರ ಪೊಲೀಸರು ಹಾಗೂ ಬಿಎಸ್‌ಎಫ್‌ ಯೋಧರನ್ನು ಈ ನಿಯೋಜಿಸಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತ ಎಣಿಕೆಯ ದಿನವಾದ ಮೇ 23ರವರೆಗೆ 24x7 ಭದ್ರತೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.