ಬೆಳಗಾವಿ: ’ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾರತ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ಸಂಜೆ ತಿರಂಗಾ ಯಾತ್ರೆ ನಡೆಯಿತು.
ನೇತೃತ್ವ ವಹಿಸಿದ್ದ ಶಾಸಕ ಅಭಯ ಪಾಟೀಲ, ‘ದೇಶದ ಸೈನಿಕರನ್ನು ಕೊಂಡಾಡುವ ಸಮಯ ಈಗ ಬಂದಿದೆ. ಪ್ರತಿ ನಾಗರಿಕನೂ ಸೈನಿಕರ ಜತೆಗಿದ್ದಾನೆ. ಭಾರತದಲ್ಲಿ ಇರುವ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುವ ಉದ್ದೇಶದಿಂದ ಈ ಯಾತ್ರೆ ಮಾಡಿದ್ದೇವೆ’ ಎಂದರು.
ಹಳೇ ಪಿ.ಬಿ ರಸ್ತೆಯಿಂದ ಆರಂಭಗೊಂಡ ಯಾತ್ರೆ ಖಾಸಬಾಗ, ಬಸವೇಶ್ವರ ವೃತ್ತ, ನಾಥಪೈ ವೃತ್ತ ಮಾರ್ಗವಾಗಿ ಸಾಗಿ, ವಡಗಾವಿಯ ಹರಿ ಮಂದಿರ ತಲುಪಿತು.
ಮಕ್ಕಳು, ಯುವಜನರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದ ಜನರು ರಾಷ್ಟ್ರಧ್ವಜ ಹಾರಾಡಿಸುತ್ತ, ಉತ್ಸಾಹದಿಂದ ಹೆಜ್ಜೆಹಾಕಿದರು. ‘ಭಾರತ್ ಮಾತಾಕಿ ಜೈ’, ‘ಸೈನಿಕರಿಗೆ ಜೈ’ ಎಂಬ ಜೈಕಾರ ಮುಗಿಲು ಮುಟ್ಟಿದ್ದವು. ಯಾತ್ರೆಯುದ್ದಕ್ಕೂ ದೇಶಭಕ್ತಿ ಗೀತೆ ಮೊಳಗಿದವು. ಹಲವರು ಭಾರತಾಂಬೆ, ಸೈನಿಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಪ್ರದರ್ಶಿಸಿದರು.
ಸ್ಕೇಟಿಂಗ್ ಪಟುಗಳು ಯಾತ್ರೆಗೆ ಮೆರುಗು ತಂದರು. ಮೇಯರ್ ಮಂಗೇಶ್ ಪವಾರ, ಉಪಮೇಯರ್ ವಾಣಿ ಜೋಶಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.