ADVERTISEMENT

ಮತ ಚಲಾಯಿಸಿದ ಲೈಂಗಿಕ ಅಲ್ಪಸಂಖ್ಯಾತರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 13:12 IST
Last Updated 23 ಏಪ್ರಿಲ್ 2019, 13:12 IST

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಲೈಂಗಿಕ ಅಲ್ಪಸಂಖ್ಯಾತರಾದ ಮಧು ಮರಾಠೆ ಅವರು ನಗರದ ಅರಣ್ಯ ಇಲಾಖೆಯ ಮತಗಟ್ಟೆಯಲ್ಲಿ, ಶಗುಣ ಅವರು ಚವಾಟ್‌ ಗಲ್ಲಿಯ ಮತಗಟ್ಟೆಯಲ್ಲಿ ಹಾಗೂ ಚಂದ್ರಿಕಾ ಅವರು ಹಲಗಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬಹಿಷ್ಕಾರ; ಮನವೊಲಿಕೆ
ರಾಮದುರ್ಗ ತಾಲ್ಲೂಕಿನ ಘಟಕನೂರ ಗ್ರಾಮದ ಮೇಲ್ವರ್ಗದ ಜನರು ತಮ್ಮನ್ನು ಬಹಿಷ್ಕರಿಸಿದ್ದಾರೆ ಎಂದು ಗ್ರಾಮದ ದಲಿತರು ಮಧ್ಯಾಹ್ನದವರೆಗೆ ಚುನಾವಣೆ ಬಹಿಷ್ಕರಿಸಿದ್ದರು. ವಿಷಯ ತಿಳಿದ ತಹಶೀಲ್ದಾರ್‌ ಬಸನಗೌಡ ಕೋಟೂರ, ಡಿಎಸ್‍ಪಿ ಬಿ.ಎಸ್. ಪಾಟೀಲ ಅವರು ದಲಿತರ ಜೊತೆ ಮಾತುಕತೆ ನಡೆಸಿ, ಮತದಾನ ಮಾಡುವಂತೆ ಮನವೊಲಿಸಿದರು. ಮಧ್ಯಾಹ್ನದ ನಂತರ ದಲಿತರು ಮತ ಚಲಾಯಿಸಿದರು.

ವಿಡಿಯೊ ವೈರಲ್‌:ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಮತಗಟ್ಟೆಗಳಲ್ಲಿ ತಾವು ಮತ ಚಲಾಯಿಸಿದ್ದನ್ನು ಕೆಲವು ವ್ಯಕ್ತಿಗಳು ವಿಡಿಯೊ ಹಾಗೂ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ್ದಾರೆ. ಕೊಡಚವಾಡ, ಕಗ್ಗನಗಿ, ಬೇಮಿನಕೊಪ್ಪ, ಮುಗಳಿಹಾಳ, ಚಿಕ್ಕದಿನ ಕೊಪ್ಪ, ಕ.ಬಾಗೇವಾಡಿ, ಅಂಗ್ರೊಳಿ ಗ್ರಾಮಗಳ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಅರಣ್ಯವಾಸಿಗಳ ಬಹಿಷ್ಕಾರ:ಭೀಮಗಢ ಅಭಯಾರಣ್ಯ ಪ್ರದೇಶ ವ್ಯಾಪ್ತಿಯ ಅರಣ್ಯವಾಸಿಗಳು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ತಮಗೆ ನೀರು, ವಿದ್ಯುತ್‌, ರಸ್ತೆ ಸೇರಿದಂತೆ ಮೂಲಸೌಕರ್ಯ ನೀಡುವವರೆಗೆ ಮತದಾನ ಮಾಡುವುದಿಲ್ಲವೆಂದು ಚಾಪೋಲಿ, ಚಿರೇಖಾನಿ, ಕಾಪೋಲಿ, ಮುಡುಗೈ, ಗವ್ವಾಳಿ, ಪಾಸ್ತೊಳಿ, ಕೊಂಗಳಾ, ಕೃಷ್ಣಾಪುರ, ಹೊಲ್ಡಾ, ದೇಗಾಂವ ಮತ್ತು ತಳೇವಾಡಿ ನಿವಾಸಿಗಳು ತಹಶೀಲ್ದಾರ್‌ರಿಗೆ ಲಿಖಿತವಾಗಿ ತಿಳಿಸಿದ್ದಾರೆ.

ಮತಯಾಚನೆ?:ಬೆಳಗಾವಿ ಸಮೀಪದ ಹಿಂಡಲಗಾ ಮತಗಟ್ಟೆ 60ರಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರ ಬಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ ಯಾಚಿಸಿದ್ದು ಕಂಡುಬಂದಿತು. ಸಹೋದರ ಚನ್ನರಾಜ ಹಟ್ಟಿಹೊಳಿ ಜೊತೆ ನೇರವಾಗಿ ಮತಗಟ್ಟೆಯೊಳಗೆ ನುಗ್ಗಿದ ಅವರು ಅಧಿಕಾರಿಗಳ ಜೊತೆಯೂ ಕುಶಲೋಪರಿ ಚರ್ಚಿಸಿದರು. ಯಾರೊಬ್ಬ ಚುನಾವಣಾಧಿಕಾರಿಯೂ ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಇದಲ್ಲದೇ, ಮತಗಟ್ಟೆಯಿಂದ ಹೊರಗೆ ಬರುವಾಗ ಲಕ್ಷ್ಮಿ ಅವರಿಗೆ ಭದ್ರತಾ ಸಿಬ್ಬಂದಿಯೊಬ್ಬರು ಹಸ್ತಲಾಘವ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.