ADVERTISEMENT

ರೈಲು ಹಳಿಯ ಮೇಲೆ ಮರ ಬಿದ್ದು

ಲೋಂಡಾ- ಮಡಗಾಂವ್ ನಡುವಿನ ರೈಲು ಮಾರ್ಗ ಬಂದ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:15 IST
Last Updated 6 ಜುಲೈ 2022, 4:15 IST
ಲೋಂಡಾ-ಮಡಗಾಂವ ಮಾರ್ಗದ ಕುಲೆಂ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಬಿದ್ದ ಮರ
ಲೋಂಡಾ-ಮಡಗಾಂವ ಮಾರ್ಗದ ಕುಲೆಂ ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಬಿದ್ದ ಮರ   

ಖಾನಾಪುರ: ಕರ್ನಾಟಕ-ಗೋವಾ ಗಡಿಯ ಅರಣ್ಯ ಪ್ರದೇಶದಲ್ಲಿ ಕಳೆದ ಭಾನುವಾರ ಸಂಜೆಯಿಂದ ಎಡೆಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಲೋಂಡಾ-ಮಡಗಾಂವ್ ರೈಲು ಮಾರ್ಗದ ಕುಲೇಂ ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಸೋಮವಾರ ಮರವೊಂದು ಬಿದ್ದಿದೆ.

ಈ ಘಟನೆಯಿಂದಾಗಿ ಲೋಂಡಾ-ಮಡಗಾಂವ ನಿಲ್ದಾಣಗಳ ನಡುವೆ ಸೋಮವಾರ ರಾತ್ರಿ ಮತ್ತು ಮಂಗಳವಾರ ಮುಂಜಾನೆ ಸಂಚರಿಸಬೇಕಿದ್ದ ಗೋವಾ ಎಕ್ಸ್‌ಪ್ರೆಸ್, ಪೂರ್ಣಾ ಎಕ್ಸ್‌ಪ್ರೆಸ್, ಅಮರಾವತಿ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವುಂಟಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಲೇ ಕ್ಯಾಸಲ್ರಾಕ್, ಲೋಂಡಾ, ಮಡಗಾಂವ ಮತ್ತು ವಾಸ್ಕೋ ನಿಲ್ದಾಣಗಳಿಂದ ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸುರಿಯುತ್ತಿರುವ ಮಳೆಯಲ್ಲೂ ಈ ಮಾರ್ಗದ ದುರಸ್ತಿ ಕಾರ್ಯಾಚರಣೆ ನಡೆಸಿದರು.

ಬೃಹತ್ ಗಾತ್ರದ ಯಂತ್ರಗಳೊಂದಿಗೆ ಘಟನಾ ಸ್ಥಳಕ್ಕೆ ತೆರಳಿ ಮರವನ್ನು ತೆರವುಗೊಳಿಸಲಾಗಿದೆ. ಮಂಗಳವಾರ ಮಧ್ಯಾಹ್ನದಿಂದ ಮತ್ತೆ ಈ ಮಾರ್ಗ ರೈಲುಗಳ ಸಂಚಾರಕ್ಕೆ ಮುಕ್ತಗೊಂಡಿದೆ. ಘಟನೆಯ ಪರಿಣಾಮ ಲೋಂಡಾ-ಮಡಗಾಂವ ನಡುವೆ ಸಂಚರಿಸಲಿದ್ದ ಕೆಲವು ರೈಲುಗಳು ತಡವಾಗಿ ಸಂಚರಿಸಿವೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ರಸ್ತೆ ಸಂಚಾರಕ್ಕೆ ಮುಕ್ತ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅವ್ಯಾಹತವಾಗಿ ಸುರಿಯಲಾರಂಭಿಸಿರುವ ಮಳೆಯಿಂದಾಗಿ ಕರ್ನಾಟಕ-ಗೋವಾ ಗಡಿ ಪ್ರದೇಶದ ಅನಮೋಡ ಘಟ್ಟದಲ್ಲಿ ಸೋಮವಾರ ಮಧ್ಯಾಹ್ನ ಭೂ-ಕುಸಿತವುಂಟಾಗಿ ರಸ್ತೆ ಸಂಪರ್ಕ ಸ್ಥಗಿತಗೊಂಡಿತ್ತು. ಬೆಳಗಾವಿ- ಪಣಜಿ ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗದ ಗುಡ್ಡ ಕುಸಿದಿತ್ತು. ಗುಡ್ಡದ ಮೇಲಿನಿಂದ ಕಲ್ಲು, ಮಣ್ಣು, ಮರಗಿಡಗಳು ಹೆದ್ದಾರಿಯ ಮೇಲೆ ಬಿದ್ದಿದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಹಲವು ಜೆಸಿಬಿ ಯಂತ್ರಗಳನ್ನು ಬಳಸಿ ಹೆದ್ದಾರಿ ಮೇಲಿನ ಕಲ್ಲು-ಮಣ್ಣಿನ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಂಗಳವಾರ ಮುಂಜಾನೆಯಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.