
ಬೆಳಗಾವಿ: ಜಿಲ್ಲೆಯಲ್ಲಿ ನಡೆಯುವ ಯಾವುದೇ ಆಸ್ತಿ ನೋಂದಣಿ, ವ್ಯವಹಾರ ಹಾಗೂ ದೃಢೀಕರಣಗಳಲ್ಲಿ ಆಧಾರ್ ಸಂಖ್ಯೆ ಅಳವಡಿಕೆ ಕಡ್ಡಾಯ. ಇಂಥ ಯಾವುದೇ ಪ್ರಕ್ರಿಯೆ ನಡೆಸುವಲ್ಲಿ ವ್ಯಕ್ತಿಗಳ ಆಧಾರ್ ಕಾರ್ಡ್ ಕಡ್ಡಾಯವಾಗಿ ದೃಢೀಕರಣ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕೆಲವು ಕಡೆ ಸತ್ತ ವ್ಯಕ್ತಿಗಳ ಹೆಸರಲ್ಲೂ ಆಸ್ತಿ ನೋಂದಣಿ, ಸತ್ತವರ ಹರೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಮಾಡುವುದು, ನಕಲಿ ವ್ಯಕ್ತಿಗಳ ಹೆಸರಲ್ಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ನೋಂದಣಿ ಮಾಡಿಕೊಳ್ಳುವ ಕುತಂತ್ರಗಳು ವರದಿಯಾಗಿವೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವ ಕಾರಣ ಈ ಆದೇಶ ಹೊರಡಿಸಲಾಗಿದೆ.
ವಂಚನೆ ಪ್ರಕರಣಗಳು, ಭೂ ವಿವಾದಗಳು, ಅಪರಾಧ ಪ್ರಕರಣಗಳು, ಸಾರ್ವಜನಿಕ ಅಶಾಂತಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿರುವುದು ಕಂಡುಬಂದಿರುತ್ತದೆ. ಇವುಗಳಿಗೆ ಪ್ರಾಥಮಿಕ ಹಂತದಲ್ಲೆ ತಡೆ ಒಡ್ಡುವುದು ಅಗತ್ಯವಾಗಿದೆ. ಆಧಾರ್ ದೃಢೀಕರಣದಿಂದ ನಕಲಿ ವ್ಯಕ್ತಿಗಳ ಪತ್ತೆ, ವಂಚನೆಗೆ ತಡೆ ನೀಡಲು ಸಹಕಾರಿ ಆಗುತ್ತದೆ.
ಅಲ್ಲದೇ, ನೋಂದಣಿಗೆ ಸಂಬಂಧಿಸಿದಂತೆ ಖರೀದಿದಾರರು, ಮಾರಾಟಗಾರರು, ದಾನಿಗಳು, ಸ್ವೀಕರಿಸುವವರು ಹಾಗೂ ಸರ್ಕಾರದಿಂದ ನೇಮಿಸಿರುವ ಅಧಿಕಾರಿಗಳು ಹಾಗೂ ಇನ್ನಿತರೆ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಆಧಾರ್ ದೃಢೀಕರಣ ಕಡ್ಡಾಯವಾಗಿ ನಡೆಸಬೇಕು ಎಂದೂ ಆದೇಶದಲ್ಲಿ ತಿಳಿಸಿದ್ದಾರೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಎಲ್ಲ ಉಪ ನೋಂದಣಾಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿಸಿದ ಇತರೆ ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಆದೇಶದ ಅನುಷ್ಠಾನಕ್ಕೆ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಹಕಾರ ನೀಡಬೇಕು ಎಂದೂ ಅವರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.