ಬೆಳಗಾವಿ: ಮಹಾರಾಷ್ಟ್ರ ಸರ್ಕಾರವು ತನ್ನ ಗಡಿ ಉಸ್ತುವಾರಿ ಸಚಿವ ಸ್ಥಾನವನ್ನು ಚಂದ್ರಕಾಂತ ಬಚ್ಚು ಪಾಟೀಲ ಮತ್ತು ಶಂಭುರಾಜ್ ದೇಸಾಯಿ ಅವರಿಗೆ ವಹಿಸಿದೆ. ಇದರ ಬಗ್ಗೆ ಶುಕ್ರವಾರ ಆದೇಶ ಹೊರಡಿಸಿದ್ದು, ಗಡಿ ತಂಟೆಯ ವಿಷಯದಲ್ಲಿ ಸಮನ್ವಯ ಸಾಧಿಸುವಂತೆ ತಿಳಿಸಿದೆ.
ಈ ಹಿಂದೆ ಏಕನಾಥ ಶಿಂಧೆ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ಇಬ್ಬರೂ ಗಡಿ ಉಸ್ತುವಾರಿ ಸಚಿವರಾಗಿದ್ದರು. ಮಹಾರಾಷ್ಟ್ರದ ಜ್ಯೋತಿರಾವ್ ಫುಲೆ ಜನಾರೋಗ್ಯ ವಿಮೆಯನ್ನು ಕರ್ನಾಟಕದಲ್ಲಿರುವ ಮರಾಠಿಗರಿಗೆ ನೀಡುವಲ್ಲಿ ಯಶಸ್ವಿ ಆಗಿದ್ದರು. ಇದಕ್ಕೆ ಪ್ರತಿಯಾಗಿ ‘ನಾನು ಮರಾಠಿಗ’ ಎಂಬ ಮುಚ್ಚಳಿಕೆಯನ್ನು ಫಲಾನುಭವಿಗಳು ಬರೆದು ಕೊಡಬೇಕು, ಅದಕ್ಕೆ ಮಹರಾಷ್ಟ್ರ ಏಕೀಕರಣ ಸಮತಿಯ ಅಂಕಿತ ಇರಬೇಕು ಎಂಬ ನಿಯಮ ರೂಪಿಸಿದ್ದರು. ಕನ್ನಡಿಗರ ಸಾಕಷ್ಟು ವಿರೋಧದ ನಡುವೆಯೂ ನಂತರವೂ ಈ ಯೋಜನೆ ಮುಂದುವರಿದಿದೆ.
ಗಡಿ ವಿವಾದದಲ್ಲಿ ಸಾಕಷ್ಟು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದ ಹಾಗೂ ಎಂಇಎಸ್ ನಾಯಕರ ಜತೆಗೆ ನಿಕಟ ಸಂಪರ್ಕ ಹೊಂದಿರುವ ಕಾರಣ ಈ ಇಬ್ಬರಿಗೂ ಮತ್ತೆ ಗಡಿ ಉಸ್ತುವಾರಿ ಸ್ಥಾನ ನೀಡಲಾಗಿದೆ.
ಎಚ್ಚೆತ್ತುಕೊಳ್ಳದ ಕರ್ನಾಟಕ ಸರ್ಕಾರ: ‘ಗಡಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಸಾಕಷ್ಟು ಎಚ್ಚರಿಕೆ ವಹಿಸುತ್ತದೆ. ಗಡಿ ಉಸ್ತುವಾರಿಯಾಗಿ ಇಬ್ಬರು ಸಚಿವರನ್ನು ನೇಮಿಸಿದೆ. ಇದು ಬೆಳಗಾವಿಯ ಎಂಇಎಸ್ ನಾಯಕರ ಬೇಡಿಕೆಯಾಗಿತ್ತು. ಗಡಿ ಉನ್ನತಾಧಿಕಾರ ಸಮಿತಿಯ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ. ಪಕ್ಕದ ರಾಜ್ಯದಲ್ಲಿ ಇಷ್ಟೆಲ್ಲ ಗಂಭೀರ ಬೆಳವಣಿಗೆ ನಡೆಯುತ್ತಿವೆ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು ಎಚ್.ಕೆ.ಪಾಟೀಲ ಅವರನ್ನು ಮತ್ತೆ ಗಡಿ ಉಸ್ತುವಾರಿ ಸಚಿವರಾಗಿ ನೇಮಿಸಬೇಕು’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.