ಹುಕ್ಕೇರಿ: ‘ಸಚಿವರಾಗಿ ಮತ್ತು ಎಂಟು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದ ಉಮೇಶ ಕತ್ತಿ ಕೇವಲ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ತಾಲ್ಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಶುಗರ್ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಉಮೇಶ ಕತ್ತಿ–ಉತ್ತರ ಕರ್ನಾಟಕದ ಕನಸುಗಾರ’ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
‘ನಾನು ಮುಖ್ಯಮಂತ್ರಿ ಇದ್ದಾಗ, ಉಮೇಶ ಕತ್ತಿ ತೋಟಗಾರಿಕೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಮಾತು ಹಾಸ್ಯಾಸ್ಪದವಾಗಿ ಕಂಡರೂ, ಅವರಲ್ಲಿ ಗಾಂಭೀರ್ಯತೆ ಇದೆ ಎಂದು ನನ್ನ ಸಂಪುಟದ ಸದಸ್ಯರಿಗೆ ಹಲವು ಬಾರಿ ತಿಳಿಸಿದ್ದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ನಿಷ್ಠುರವಾಗಿ ಮಾತನಾಡುತ್ತಿದ್ದ ಅವರು, ಅಂಕಿ–ಅಂಶ ಸಮೇತವಾಗಿ ವಾದಕ್ಕೆ ಇಳಿಯುತ್ತಿದ್ದರು’ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಉಮೇಶ ಕತ್ತಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಈ ಭಾಗದಲ್ಲಿ ಅಚ್ಚಳಿಯದೆ ಉಳಿದಿವೆ. ಹಿಡಕಲ್ ಡ್ಯಾಂ ಎದುರು ಮೈಸೂರು ಬೃಂದಾವನ ಮಾದರಿಯಲ್ಲಿ ಉದ್ಯಾನ ನಿರ್ಮಿಸುವ ಆಸೆ ಅವರಿಗಿತ್ತು. ಅದನ್ನು ನನಸು ಮಾಡುವ ಜವಾಬ್ದಾರಿ ಪುತ್ರ ನಿಖಿಲ್ ಮತ್ತು ಸಹೋದರ ರಮೇಶ ಅವರ ಮೇಲಿದೆ’ ಎಂದು ತಿಳಿಸಿದರು.
ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ, ಶಾಸಕ ಅಭಯ ಪಾಟೀಲ, ಮಾಜಿ ಸಂಸದ ಶಿವಕುಮಾರ ಉದಾಸಿ, ಉಮೇಶ ಅವರ ಮೊಮ್ಮಕ್ಕಳಾದ ಅರವ್, ಆರುಷ್, ವೈಷ್ಣವಿ ಮಾತನಾಡಿದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಅಧ್ಯಕ್ಷತೆ ವಹಿಸಿದ್ದರು. ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ವಿರಕ್ತಮಠದ ಶಿವಬಸವ ಸ್ವಾಮೀಜಿ, ಬಾಗೇವಾಡಿಯ ಶಿವಾನಂದ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ, ಹಿರೇಮಠದ ಸಂಪತಕುಮಾರ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು.
ಸಾಹಿತಿ ವಿ.ಎಸ್.ಮಾಳಿ ಅವರು, ಗ್ರಂಥ ಪರಿಚಯಿಸಿದರು.
ಉಮೇಶ ಅವರ ಪತ್ನಿ ಶೀಲಾ ಕತ್ತಿ, ಶಾಸಕರಾದ ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ, ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ, ಹುಕ್ಕೇರಿ–ಸಂಕೇಶ್ವರ ಪುರಸಭೆ ಸದಸ್ಯರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಸಹಕಾರಿ ಧುರೀಣರು ಹಾಜರಿದ್ದರು.
ಶಾಸಕ ನಿಖಿಲ್ ಕತ್ತಿ ಸ್ವಾಗತಿಸಿದರು. ಶ್ರೀಶೈಲ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನೀತಾ ದೇಸಾಯಿ ನಿರೂಪಿಸಿದರು. ವಿಎಸ್‌ಎಲ್ ನಿರ್ದೇಶಕ ಪೃಥ್ವಿ ಕತ್ತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.