ADVERTISEMENT

ಬೆಳಗಾವಿ: ವರಮಹಾಲಕ್ಷ್ಮಿಗಾಗಿ ಭರ್ಜರಿ ವ್ಯಾಪಾರ

ದೇವಿಗೆ ವಿವಿಧ ಅಲಂಕಾರ ಮಾಡಲು ವನಿತೆಯರ ಸಿದ್ಧತೆ, ದರ ಹೆಚ್ಚಳದ ಮಧ್ಯೆಯೂ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:42 IST
Last Updated 8 ಆಗಸ್ಟ್ 2025, 2:42 IST
ಬೆಳಗಾವಿಯ ಮಾರುಕಟ್ಟೆಯಲ್ಲಿ ಗುರುವಾರ ಕಂಡುಬಂದ ಜನಸಂದಣಿ
ಬೆಳಗಾವಿಯ ಮಾರುಕಟ್ಟೆಯಲ್ಲಿ ಗುರುವಾರ ಕಂಡುಬಂದ ಜನಸಂದಣಿ   

ಬೆಳಗಾವಿ: ಶ್ರಾವಣ ಮಾಸ ಆರಂಭವಾದಾಗಿನಿಂದ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗಿದೆ. ಅದರೊಂದಿಗೆ ಪೂಜಾ ಸಾಮಗ್ರಿಗಳ ಬೆಲೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಶುಕ್ರವಾರ ಹಾಗೂ ಮಂಗಳವಾರ ವರಮಹಾಲಕ್ಷ್ಮಿ ವ್ರತಾಚರಣೆ ಕಾರಣ, ವ್ಯಾಪಾರಿಗಳು ದರ ವಿಪರೀತ ಏರಿಸಿದ್ದಾರೆ.

ಬೆಲೆ ಏರಿಕೆ ನಡುವೆಯೂ ಹಬ್ಬದ ಸಂಭ್ರಮಕ್ಕೆ ಕೊರತೆ ಉಂಟಾಗಿಲ್ಲ. ಈ ಬಾರಿ ಮುಂಗಾರು ಹಂಗಾಮು ಸಂಭ್ರಮ ತಂದಿದ್ದು, ಗ್ರಾಮೀಣ ಪ್ರದೇಶದ ರೈತರೂ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದ ಗ್ರಾಹಕರ ಚೇಬಿಗೆ ಕತ್ತರಿ ಬಿದ್ದರೆ ವರ್ತಕರು ಝಣಝಣ ಕಾಂಚಾಣ ಎಣಿಸುತ್ತಿದ್ದಾರೆ.

ಗುರುವಾರ ಕೂಡ ನಗರದ ಎಲ್ಲ ಮಾರುಕಟ್ಟೆಗಳಲ್ಲೂ ಜನಜಂಗುಳಿ ಕಂಡುಬಂತು. ಮಡಿಸೀರೆ, ಕಣ, ಹೂವು, ಹಣ್ಣು, ಬಾಳೆದಿಂಡು, ಕಬ್ಬನಗರಿ, ಮಾಲೆಗಳು, ಕಾಯಿ– ಕರ್ಪೂರ ಸೇರಿದಂತೆ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ವನಿತೆಯರು ಖರೀದಿಸಿದರು.

ADVERTISEMENT

ಇಲ್ಲಿನ ಖಡೆ ಬಜಾರ್, ಗಣಪತಿ ಗಲ್ಲಿ, ರಿಸಾಲ್ದಾರ ಗಲ್ಲಿ, ಮಾರುತಿ ಗಲ್ಲಿ, ಕಾಕತಿವೇಸ್‌ ಸೇರಿದಂತೆ ಎಲ್ಲ ಮಾರುಕಟ್ಟೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿತ್ತು.

ಇದೇ ಅವಕಾಶ ಬಳಸಿಕೊಂಡ ವ್ಯಾ‍ಪಾರಿಗಳು ವಸ್ತುಗಳ ದರ ಏರಿಸಿದ್ದಾರೆ. ಅದರಲ್ಲೂ ಅಲಂಕಾರಕ್ಕೆ ಬಳಸುವ ಹೂವಿನ ದರಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಕಳೆದೊಂದು ವಾರದಿಂದ ಧಾರಾಕಾರ ಮಳೆಯ ಕಾರಣ ಹೆಚ್ಚಿನ ಪ್ರಮಾಣದ ಹೂವು ಮಾರುಕಟ್ಟೆಗೆ ಬಂದಿಲ್ಲ. ಇದು ಕೂಡ ಹೂವಿನ ದರ ಹೆಚ್ಚಲು ಕಾರಣವಾಗಿದೆ ಎಂಬುದು ವ್ಯಾಪಾರಿಗಳ ಹೇಳಿಕೆ. ಭಾನುವಾರ ₹400ರಷ್ಟಿದ್ದ ಒಂದು ಕೆಜಿ ಹೂವಿನ ದರ ಗುರುವಾರ ₹510ಕ್ಕೆ ಏರಿಕೆಯಾಗಿದೆ. ₹80ರಿಂದ ₹100ಕ್ಕೆ ಐದು ಬಾಳೆದಿಂಡು, ಐದು ಕಬ್ಬಿನಗಣಿಗಳು, ₹320 ಇದ್ದ ಗುಲಾಭಿ ಹಾಗೂ ಸೇವಂತಿಗೆ ಹೂವಿನ ದರ ಈಗ ₹450ಕ್ಕೆ ಏರಿದೆ. ಪೂಜೆಗೆ ಮುಖ್ಯವಾದ ಚೆಂಡುಹೂವು ಯಥೇಚ್ಛವಾಗಿ ಮಾರುಕಟ್ಟೆಗೆ ಬಂದಿದೆ. ಆದರೂ ₹100ರಷ್ಟಿದ್ದ ದರ ಈಗ ₹150ಕ್ಕೆ ಏರಿದೆ. ತೆಂಗಿನಕಾಯಿ ದರ ಕೂಡ ₹60ರಿಂದ ₹70ಕ್ಕೆ ನೆಗೆದಿದೆ.

‘ಸೋಲಾ ಸಿಂಗಾರ’ಕ್ಕೆ ವನಿತೆಯರ ಸಿದ್ಧತೆ:

ವರಮಹಾಲಕ್ಷ್ಮಿ ವನಿತೆಯರ ಹಬ್ಬ. ಅಲಂಕಾರ ಎಂದರೇನೇ ಹೆಣ್ಣುಮಕ್ಕಳಿಗೆ ಅಚ್ಚುಮೆಚ್ಚು. ಅದರಲ್ಲೂ ವರಮಹಾಲಕ್ಷ್ಮಿಯನ್ನು ಅಲಂಕಾರ ಮಾಡುವಾಗ ಅತಿಯಾದ ಶ್ರದ್ಧೆ. ಗಡಿ ಭಾಗದಲ್ಲಿ ಕನ್ನಡ– ಮರಾಠಿ ಸಂಸ್ಕೃತಿಗಳು ಸಂಗಮವಾಗಿದ್ದರಿಂದ ‘ಸೋಲಾ ಸಿಂಗಾರ’ಕ್ಕೆ ಹೆಚ್ಚು ಆಸ್ಥೆ. ದೇವಿಗೆ 16 ನಮೂನೆಯ ವಸ್ತುಗಳಿಂದ ಅಲಂಕಾರ ಮಾಡುವುದಕ್ಕೆ ಸೋಲಾ ಸಿಂಗಾರ ಎನ್ನುತ್ತಾರೆ. ದೇವಿಗೆ ಇದು ಅತ್ಯಂತ ಪ್ರಿಯವಾದ ಅಲಂಕಾರ ಎಂಬ ಕಾರಣಕ್ಕೆ ಗೃಹಿಣಿಯರು ತಮ್ಮ ಒಡವೆ ವಸ್ತ್ರ ಆಭರಣ ಮಡಿಗಳನ್ನು ಸೇರಿಸಿ ದೇವಿ ಅಲಂಕರಿಸುತ್ತಾರೆ. ಗಂಧ ಕುಂಕುಮ ಎಲೆ– ಅಡಿಕೆ ಕಾರೀಕ್‌ ಬದಾಮಿ ಅರಿಸಿನಬೇರು ಹಣ್ಣು ಹೀಗೆ ಒಟ್ಟು 16 ವಸ್ತುಗಳನ್ನು ಸೇರಿಸಿ ಉಡಿ ತುಂಬುವುದು ವಾಡಿಕೆ. ವರಮಹಾಲಕ್ಷ್ಮಿಗೆ ‘ನಿತ್ಯಸುಮಂಗಲಿ’ ಎಂದೂ ಪುರಾಣದಲ್ಲಿ ಕರೆಯಲಾಗಿದೆ. ಹೆಣ್ಣುಮಕ್ಕಳು ಸಾಕ್ಷಾತ್‌ ವರಲಕ್ಷ್ಮಿಯ ಅವತಾರ ಎಂಬ ನಂಬಿಕೆಯಿಂದ ಈ ರೀತಿ ಉಡಿ ತುಂಬಿ ಅವರಿಂದ ಆಶೀರ್ವಾದ ಪಡೆಯುವುದು ಈ ಹಬ್ಬದ ಪ್ರಮುಖ ಆಚರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.