ಬೆಳಗಾವಿಯಲ್ಲಿ ಬಿರುಸಿನ ಮಳೆ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದೊಂದು ವಾರದಿಂದ ಸುರಿಯುತ್ತಿದ್ದ ತುಂತುರು ಮಳೆ ಮಂಗಳವಾರದಿಂದ ಬಿರುಸು ಪಡೆದಿದೆ.
ಬೆಳಗಾವಿಯಲ್ಲಿ ಸೋಮವಾರ ರಾತ್ರಿಯಿಂದ ಆರಂಭಗೊಂಡ ಧಾರಾಕಾರ ಮಳೆ ಮಂಗಳವಾರ ದಿನವಿಡೀ ಮುಂದುವರಿದಿದ್ದು, ಹಲವು ಅವಾಂತರ ಸೃಷ್ಟಿಸಿತು.
ಗಾಂಧಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ, ಜಿಲ್ಲಾಸ್ಪತ್ರೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮತ್ತಿತರ ಮಾರ್ಗಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತು, ವಾಹನ ಸವಾರರು ಪರದಾಡಿದರು.
ಮರಾಠ ಕಾಲೊನಿಯಲ್ಲಿ ಮನೆಗೆ ನುಗ್ಗಿದ್ದ ನೀರು ಹೊರಹಾಕಲು ಜನರು ಪ್ರಯಾಸಪಟ್ಟರು. ಶಹಾಪುರ ಪೊಲೀಸ್ ಠಾಣೆ ಬಳಿ ಕೊಳಚೆ ನೀರು ರಸ್ತೆ ಮೇಲೆ ಹರಿಯಿತು.
ಧರ್ಮವೀರ ಸಂಭಾಜಿ ವೃತ್ತದಲ್ಲಿ ಬಸ್ ತಂಗುದಾಣಕ್ಕೂ ನೀರು ನುಗ್ಗಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಶಾಲೆ ಆರಂಭವಾಗುವ ಮತ್ತು ಬಿಡುವ ಹೊತ್ತಿಗೆ ಬಿರುಸಿನ ಮಳೆಯಾದ ಕಾರಣ, ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು.
ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ–ವಹಿವಾಟಿಗೂ ತೊಡಕಾಯಿತು. ಜನಸಂದಣಿ ಎಂದಿಗಿಂತ ಕಡಿಮೆ ಇತ್ತು.
ಸತತ ಮಳೆಯಿಂದ ಶಾಹೂ ನಗರ, ಮರಾಠ ಕಾಲೊನಿ, ರಾಣಿ ಚನ್ನಮ್ಮ ನಗರ, ವಿಶ್ವೇಶ್ವರಯ್ಯ ನಗರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ 10ಕ್ಕೂ ಅಧಿಕ ಮರ ಧರೆಗುರುಳಿ, ಸಂಚಾರಕ್ಕೆ ತೊಡಕಾಯಿತು. ಮಹಾನಗರ ಪಾಲಿಕೆ ಸಿಬ್ಬಂದಿ ಮರ ತೆರವುಗೊಳಿಸಿದರು.
ಪಾಲಿಕೆ ಆಯುಕ್ತೆ ಬಿ.ಶುಭ, ಪರಿಸರ ಎಂಜಿನಿಯರ್ ಹನುಮಂತ ಕಲಾದಗಿ ಹಾಗೂ ಪಾಲಿಕೆ ಸದಸ್ಯರು ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆ, ಕಾಲೇಜಿಗೆ ರಜೆ 25ರಂದು
ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಜೂನ್ 25ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.