ADVERTISEMENT

ಕೌಜಲಗಿ: ಇದ್ದೂ ಇಲ್ಲದಂತಾದ ಪಶು ಆಸ್ಪತ್ರೆ

ವೈದ್ಯರು, ಸಿಬ್ಬಂದಿ ಅಲಭ್ಯ, ಜಾನುವಾರುಗಳಿಗೆ ಸಿಗದ ಚಿಕಿತ್ಸೆ, ರೈತರಿಗೆ ತಪ್ಪದ ಪರದಾಟ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 7:03 IST
Last Updated 13 ಮಾರ್ಚ್ 2025, 7:03 IST
ಕೌಜಲಗಿ ಪಟ್ಟಣದ ಹೋಬಳಿ ಮಟ್ಟದ ಪಶು ಆಸ್ಪತ್ರೆ ಕಟ್ಟಡ
ಕೌಜಲಗಿ ಪಟ್ಟಣದ ಹೋಬಳಿ ಮಟ್ಟದ ಪಶು ಆಸ್ಪತ್ರೆ ಕಟ್ಟಡ   

ಕೌಜಲಗಿ: ವೈದ್ಯರ, ಕೊರತೆ, ಸಿಬ್ಬಂದಿ ಕೊರತೆ, ಶುಚಿತ್ವದ ಕೊರತೆ ಹಾಗೂ ಔಷಧೋಪಚಾರಕ್ಕೆ ಪರದಾಟ... 

ಇಲ್ಲಿನ ಹೋಬಳಿ ಕೇಂದ್ರದ ಪಶು ಸ್ಪತ್ರೆಯ ಸದ್ಯದ ಪರಿಸ್ಥಿತಿ ಇದು. ಕಾರ್ಯವಾಪ್ತಿ ಹಾಗೂ ಕೆಲಸದ ಒತ್ತಡ ಹೆಚ್ಚಾಗಿದ್ದರಿಂದ ಈ ಆಸ್ಪತ್ರೆ ಇಲ್ಲಿ ಇದ್ದೂ ಇಲ್ಲದಂತಾಗಿದೆ. ರೈತರು, ತೋಟಪಟ್ಟಿಗಳ ಜನರು ದಿನವೂ ಜಾನುವಾರುಗಳನ್ನು ಚಿಕಿತ್ಸೆಗೆ ಕರೆತರುತ್ತಾರೆ. ಆದರೆ, ವೈದ್ಯರು– ಸಿಬ್ಬಂದಿ ಸೂಕ್ತ ಸಮಯಕ್ಕೆ ಸಿಗದೇ ಮರಳಿ ಹೋಗುವುದು ಸಾಮಾನ್ಯವಾಗಿದೆ. ಪಶು ಆಸ್ಪತ್ರೆ ಸರಿಯಾಗಿ ತೆರೆಯದೇ ಇರುವುದರಿಂದ ಸುತ್ತಲಿನ ಪರಿಸರ ಕಸದ ತೊಟ್ಟಿಯಂತಾಗಿದೆ.

ಕೌಜಲಗಿ ಸುತ್ತಮುತ್ತಲಿನ 10 ಗ್ರಾಮಗಳಿಗೆ ಇಲ್ಲಿಯ ಪಶು ಆಸ್ಪತ್ರೆ ಒಂದೇ ಕೇಂದ್ರವಾಗಿದೆ. ನಿತ್ಯ ರೈತರು ಆಡು, ಕುರಿ, ಮೇಕೆ, ಎಮ್ಮೆ, ಹಸು ಮುಂತಾದ ಪ್ರಾಣಿಗಳ ಆರೋಗ್ಯ ಚಿಕಿತ್ಸೆಗಾಗಿ ಬರುತ್ತಾರೆ. ಆದರೆ, ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಇದ್ದ ಆಸ್ಪತ್ರೆಯೂ ಮುಚ್ಚಿ ಹೋಗುವ ಸ್ಥಿತಿ ಇದೆ.

ADVERTISEMENT

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂಜೀವ ಚನ್ನಾಳ, ‘ಕೌಜಲಗಿ ಪಶು ಆಸ್ಪತ್ರೆಗೆ ಸುತ್ತಲಿನ 10 ಹಳ್ಳಿಗಳು ಒಳಗೊಂಡಿದೆ. ಇದರಿಂದ ಕಾರ್ಯ ಒತ್ತಡ ಹೆಚ್ಚಾಗಿದೆ. ಹೋಬಳಿ ಮಟ್ಟದ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿಯ ಕೊರತೆ ಇದ್ದು, ವೈದ್ಯಾಧಿಕಾರಿಯಾಗಿ ನಾನು ಒಬ್ಬನೇ ಕಾರ್ಯನಿರ್ವಹಿಸುತ್ತಿದ್ದೇನೆ. ರೈತರ ತೋಟಗಳಿಗೂ ಭೇಟಿ ನೀಡಿ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದೇನೆ. ಹೆಚ್ಚಿನ ಸಿಬ್ಬಂದಿಯ ಅಗತ್ಯ ಇದೆ’ ಎಂದರು.

ಈ ಬಗ್ಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಜಿಲ್ಲಾ ಆಥವಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗಮನ ಹರಿಸಿಲ್ಲ. ಈ ಬಗ್ಗೆ ಜನ ಸಾಕಷ್ಟು ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದೂ ಜನ ದೂರಿದ್ದಾರೆ.

ಕೌಜಲಗಿ ಪಶು ಆಸ್ಪತ್ರೆ ಬಹಳ ತಿಂಗಳಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ವೈದ್ಯಾಧಿಕಾರಿ ಸಿಬ್ಬಂದಿ ಕೊರತೆ ಇದೆ. ವೈದ್ಯರು ಯಾವಾಗಲೂ ಸಿಗುವುದಿಲ್ಲ.
–ಡಾ.ರಾಜೇಂದ್ರ ಸಣ್ಣಕ್ಕಿ, ಸ್ಥಳೀಯ ಮುಖಂಡ
ಕೌಜಲಗಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಸಿಬ್ಬಂದಿ ಬಗ್ಗೆ ರೈತರು ಆರೋಪ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಚಿಕಿತ್ಸೆಗೂ ಸ್ಪಂದಿಸುತ್ತೇವೆ.
–ಡಾ.ಮೋಹನ ಕಮತ, ವೈದ್ಯಾಧಿಕಾರಿ ತಾಲ್ಲೂಕು ಪಶು ಆಸ್ಪತ್ರೆ ಗೋಕಾಕ
ಪಶು ಆಸ್ಪತ್ರೆಯ ಸಿಬ್ಬಂದಿ ಸರಿಯಾಗಿ ರೈತರಿಗೆ ಸ್ಪಂದಿಸುತ್ತಿಲ್ಲ. ಪಶುಗಳಿಗೆ ಬೇನೆ ಬಂದಾಗ ರೈತರ ತೋಟಗಳಿಗೆ ಬಾರದೆ ಹಲವಾರು ಹಸುಗಳು ಸತ್ತು ಹೋಗಿವೆ.
–ಬಸಪ್ಪ ಭೀಮಪ್ಪ ಹೊಸಮನಿ, ಸ್ಥಳೀಯ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.