ADVERTISEMENT

ವಿಶ್ವಕರ್ಮರ ಆದರ್ಶ ಪಾಲಿಸಿ: ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ

ಜಿಲ್ಲಾಡಳಿತದಿಂದ ವಿಶ್ವಕರ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 12:30 IST
Last Updated 17 ಸೆಪ್ಟೆಂಬರ್ 2019, 12:30 IST
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಪೂಜೆ ಸಲ್ಲಿಸಿದರು
ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಪೂಜೆ ಸಲ್ಲಿಸಿದರು   

ಬೆಳಗಾವಿ: ‘ವಿಶ್ವಕರ್ಮರಂತಹ ಮಹಾನ್ ದಾರ್ಶನಿಕರು ನಡೆದು ಬಂದ ದಾರಿ ಮತ್ತು ವಿಚಾರಧಾರೆಗಳನ್ನು ಅರಿತುಕೊಂಡು ಅವುಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯವಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ 4ನೇ ವರ್ಷದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ವರ್ಷ ಜಿಲ್ಲೆಯಲ್ಲಿ ಪ್ರವಾಹ ಬಂದಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರು ಮನೆ, ಬೆಳೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಆದ್ದರಿಂದ ಸರ್ಕಾರ ಹಾಗೂ ಸಮಾಜದ ಜನರ ಆಶಯದಂತೆ ಸರಳವಾಗಿ ಜಯಂತಿ ಆಚರಿಸಿರುವುದು ಅಭಿನಂದನಾರ್ಹ’ ಎಂದರು.

ADVERTISEMENT

‘ಸಮಾಜದಲ್ಲಿ ಯಾವುದೇ ಸಂಕಷ್ಟಗಳು ಎದುರಾದರೂ ಅವುಗಳನ್ನು ಎದುರಿಸಿ ಎಲ್ಲರೂ ಒಗ್ಗಟ್ಟಾಗಿ ಬದುಕುವುದಕ್ಕೆ ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ‘ಸಮಾಜದಲ್ಲಿ ದ್ವೇಷ, ವೈಷಮ್ಯ, ಜಾತಿ ತಾರತಮ್ಯ, ದೌರ್ಜನ್ಯಗಳನ್ನು ಹೋಗಲಾಡಿಸಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.

ರಾಯಬಾಗ ತಾಲ್ಲೂಕಿನ ಕಪ್ಪಲಗುದ್ದಿ ಗ್ರಾಮದ ಅಂಧ ಕಲಾವಿದ ಕುಮಾರ ಬಡಿಗೇರ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಮುಖಂಡರಾದ ಕಲ್ಲಪ್ಪ ಬಡಿಗೇರ, ಅಜ್ಜಪ್ಪ ಬಡಿಗೇರ, ಚನ್ನಪ್ಪ ಪತ್ತಾರ, ಪಿ.ಜಿ. ಪತ್ತಾರ, ಶಂಕರ ಬಡಿಗೇರ, ರಾಜು ಬಡಿಗೇರ, ಡಾ.ಈರಪ್ಪ ಪತ್ತಾರ, ಪುಂಡಲೀಕ ಹೆಬ್ಬಳ್ಳಿ, ಮಾರುತಿ ಕಂಬಾರ, ಸುರೇಶ ಕಂಬಾರ, ಜನಾರ್ಧನ ಬಡಿಗೇರ, ವಿಜಯ ಪತ್ತಾರ, ಮನೋಹರ ಬಡಿಗೇರ, ಕೃಷ್ಣ ಕಡಕೋಳ, ಗೀತಾ ಸುತಾರ, ಆನಂದ ಪತ್ತಾರ, ಪದ್ಮಶ್ರೀ ಪತ್ತಾರ, ರವಿಶಂಕರ ಪತ್ತಾರ, ವೈಶಾಲಿ ಸುತಾರ, ಅರ್ಚನಾ ಮೇಸ್ತ್ರಿ, ಭರತ ಶಿರೋಡಕರ, ಸಿ.ವೈ. ಪತ್ತಾರ, ಪುಂಡಲೀಕ ಬಡಿಗೇರ, ಸುರೇಶ ಬಡಿಗೇರ, ಎಸ್.ಕೆ. ಪತ್ತಾರ, ಎಲ್.ಎನ್. ಸುತಾರ, ಉಮೇಶ ಪತ್ತಾರ, ಪ್ರಭಾ ಪತ್ತಾರ, ಸಾವಿತ್ರಿ ಕಮ್ಮಾರ, ಮಂಜುಳಾ ಪೋತದಾರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.