ಬೈಲಹೊಂಗಲ: ಮತಕ್ಷೇತ್ರದ ಚಚಡಿ ಗ್ರಾಮಕ್ಕೆ ಮಾಜಿ ಶಾಸಕ ವಿಶ್ವನಾಥ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕೆಲ ಕಾರ್ಯಕರ್ತರು ಬುಧವಾರ ಭೇಟಿ ನೀಡಿ ವಾಂತಿ, ಭೇದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರ ಆರೋಗ್ಯ ವಿಚಾರಿಸಿದರು.
ಗ್ರಾಮದ ಹಿರಿಯರ, ಮುಖಂಡರೊಂದಿಗೆ ಚರ್ಚಿಸಿ ವಾಂತಿ, ಭೇದಿಗೆ ಒಳಗಾಗಿ ತೊಂದರೆಗೆ ಅನುಭವಿಸಿದ ಗ್ರಾಮಸ್ಥರ ಬಗ್ಗೆ ವಿಚಾರಿಸಿದರು.
ಗ್ರಾಮದ ಪ್ರಾಥಮಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ನಂತರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಆಡಳಿತ ಮಂಡಳಿ ಸದಸ್ಯರು, ಪಿಡಿಒ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಗ್ರಾಮದಲ್ಲಿ ವಾಂತಿ, ಭೇದಿ ಉಲ್ಬಣಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಕೂಡಲೇ ಕುಡಿಯುವ ನೀರಿನ ಟ್ಯಾಂಕರ್ ಮತ್ತು ಪೈಪ್‌ಲೈನ್‌ಗಳನ್ನು ಸಂಪೂರ್ಣ ಶುದ್ಧೀಕರಿಸಿದ ನಂತರವೇ ನೀರು ಪೂರೈಸಬೇಕು. ನಿರ್ಲಕ್ಷ್ಯ ತೋರದೆ ಗ್ರಾಮದ ಜನರ ಆರೋಗ್ಯ ಕಾಳಜಿ ವಹಿಸಬೇಕು ಎಂದರು.
ಚಚಡಿ ಗ್ರಾಮದಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದರಿಂದ ಸವದತ್ತಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತಕುಮಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ಅಯ್ಯಂಗಾರಿ ಅವರ ಮಾರ್ಗದರ್ಶನದಲ್ಲಿ ಸ್ವರಾಜ್ ಶುದ್ಧ ಕುಡಿಯುವ ನೀರು ಪರಿವಾರದಿಂದ ಕುಡಿಯುವ ನೀರಿನ ವಾಹನಗಳ ಮೂಲಕ ಗ್ರಾಮಸ್ಥರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರೂ ಪೂರೈಸಲಾಗುತ್ತಿದೆ. ಅಲ್ಲದೆ ಗ್ರಾಮಸ್ಥರು ಎಲ್ಲರು ನೀರು ಕಾಯಿಸಿ, ಆರಿಸಿ ಕುಡಿಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ವರಾಜ್ ಶುದ್ಧ ಕುಡಿಯುವ ನೀರು ಘಟಕ ಮುಖ್ಯಸ್ಥ ಬಾಳನಗೌಡ ಪಾಟೀಲ ತಿಳಿಸಿದರು.
ಮುಖಂಡರಾದ ಶ್ರೀಶೈಲ ಯಡಳ್ಳಿ, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.