ADVERTISEMENT

ವಿಟಿಯು ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್‌

ಸಂಕಷ್ಟದಲ್ಲೇ ಶಿಕ್ಷಣ ಪೂರ್ಣಗೊಳಿಸಿದ ಅನುಷಾ ಭಟ್‌

ಇಮಾಮ್‌ಹುಸೇನ್‌ ಗೂಡುನವರ
Published 5 ಜುಲೈ 2025, 1:07 IST
Last Updated 5 ಜುಲೈ 2025, 1:07 IST
<div class="paragraphs"><p>ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ–1) ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ</p></div>

ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ–1) ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳು ಸಂಭ್ರಮಿಸಿದ್ದು ಹೀಗೆ

   

  ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ 

ಬೆಳಗಾವಿ: ‘ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ತಮ್ಮ ಕೋರ್ಸ್‌ನಲ್ಲಿ ಪ್ರತಿವರ್ಷ (ಎರಡೂ ಸೆಮಿಸ್ಟರ್‌ ಸೇರಿ) 10ಕ್ಕೆ 9.5ಕ್ಕಿಂತ ಹೆಚ್ಚು ಸಿಜಿಪಿಎ ಅಂಕ ಗಳಿಸಿದರೆ, 10 ಗ್ರಾಂ ಚಿನ್ನದ ನಾಣ್ಯ ಬಹುಮಾನವಾಗಿ ಸಿಗುತ್ತಿತ್ತು. ನನಗೆ ನಾಲ್ಕು ವರ್ಷವೂ ಸೇರಿ, 40 ಗ್ರಾಂ ಚಿನ್ನ ಸಿಕ್ಕಿತು. ಹಣದ ಕೊರತೆಯಾದಾಗ, ಚಿನ್ನದ ನಾಣ್ಯ ಅಡವಿಟ್ಟು ಓದಿದ್ದೆ. ಅದಕ್ಕೀಗ ಫಲ ಸಿಕ್ಕಿದೆ. ಎಲ್ಲರ ಎದುರು ಚಿನ್ನದ ಪದಕ ಪಡೆಯಲು ಖುಷಿಯಾಗುತ್ತಿದೆ’

ADVERTISEMENT

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (ವಿಟಿಯು) ಶುಕ್ರವಾರ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ (ಭಾಗ–1) ಎರಡು ಚಿನ್ನದ ಪದಕ ಗಳಿಸಿದ ದಾವಣಗೆರೆಯ ಜಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಬಯೋಟೆಕ್ನಾಲಜಿ ವಿಭಾಗದ ಅನುಷಾ ಭಟ್‌ ‘ಪ್ರಜಾವಾಣಿ’ ಜತೆ ಹೀಗೆ ಸಂತಸ ಹಂಚಿಕೊಂಡರು.

‘ಕಾಲೇಜು, ಹಾಸ್ಟೆಲ್‌ನ ಶುಲ್ಕ ಸೇರಿ ವರ್ಷಕ್ಕೆ ₹1 ಲಕ್ಷಕ್ಕೂ ಹೆಚ್ಚು ಹಣ ಬೇಕಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನಗದ್ದೆಯಲ್ಲಿ ಕೃಷಿಕರಾದ ತಂದೆ ಕಷ್ಟಪಟ್ಟು ಓದಿಸಿದರು. ಬಿ.ಇ ಅಂತಿಮ ವರ್ಷದಲ್ಲಿ 10ಕ್ಕೆ 9.73 ಸಿಜಿಪಿಎ ಅಂಕ ಸಿಕ್ಕಿದೆ’ ಎಂದರು. ಅವರಿಗೆ ಎಂ.ಟೆಕ್ ಓದಿ, ವಿಜ್ಞಾನಿಯಾಗುವ ಗುರಿಯಿದೆ.

ನಮ್ರತಾಗೆ 13 ಪದಕ: ಸಿವಿಲ್‌ ವಿಭಾಗದಲ್ಲಿ ಬೆಂಗಳೂರಿನ ಆಕ್ಸ್‌ಫರ್ಡ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ನಮ್ರತಾ ಸಿ. ಪ್ರಭು 13 ಚಿನ್ನದ ಪದಕ ಗಳಿಸಿದರು. ಎಂಬಿಎ ಓದಿ, ಆಡಳಿತ ವಿಭಾಗದಲ್ಲಿ ಕೆಲಸ ಮಾಡುವ ಗುರಿಯಿದೆ’ ಎಂದು ನಮ್ರತಾ ತಿಳಿಸಿದರು.  

‘ಇನ್‌ಫಾರ್ಮೇಷನ್ ಸೈನ್ಸ್‌’ ವಿಭಾಗದಲ್ಲಿ 4 ಚಿನ್ನದ ಪದಕ ಗಳಿಸಿದ ಮೂಡುಬಿದಿರೆಯ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನ ಮೇದಿನಿ ಎಸ್‌. ರಾವ್‌, ‘ನನ್ನ ತಂದೆ ಜ್ಯೂಸ್‌ ಸೆಂಟರ್‌ ನಡೆಸುತ್ತ ಓದಿಸಿದ್ದಾರೆ. ಮುಂದೆ ಎಂ.ಟೆಕ್‌ ಮಾಡಲು ಬಯಸಿದ್ದೇನೆ’ ಎಂದರು.

ಬೆಳಗಾವಿಯ ವಿಟಿಯುವಿನಲ್ಲಿ ಶುಕ್ರವಾರ ನಡೆದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾ.ವಿ.ನಾರಾಯಣನ್‌ ಪ್ರಶಾಂತ್‌ ಪ್ರಕಾಶ್‌ ಮತ್ತು ಸಿ.ಎಸ್‌.ಸುಂದರ್‌ ರಾಜು ಅವರಿಗೆ ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ ಗೆಹಲೋತ್‌ ಅವರು ಪ್ರೊ.ಎಸ್‌.ವಿದ್ಯಾಶಂಕರ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ
ಅನುಷಾ ಭಟ್‌
ನಮ್ರತಾ ಸಿ. ಪ್ರಭು
ತಾಯಿ ಭಾಗ್ಯಶ್ರೀ ಅವರೊಂದಿಗೆ ಏಳು ಚಿನ್ನದ ಪದಕ ಗಳಿಸಿದ ಕಾರ್ತಿಕ್‌ ಎಲ್‌.
ನಮ್ಮ ವಿದ್ಯಾರ್ಥಿಗಳು ವಿಟಿಯುವಿನ ಮೊದಲ 10ರಲ್ಲಿ ರ್‍ಯಾಂಕ್‌ ಪಡೆದರೆ 4 ವರ್ಷ ಅವರಿಂದ ಭರಿಸಿಕೊಂಡ ಶೈಕ್ಷಣಿಕ ಶುಲ್ಕ ಮರಳಿಸುತ್ತೇವೆ. ಅನುಷಾ ಅವರ ಶುಲ್ಕ ಹಿಂದಿರುಗಿಸುತ್ತೇವೆ
ತೇಜಸ್ವಿ ಕಟ್ಟೀಮನಿ ನಿರ್ದೇಶಕ ತರಬೇತಿ ಮತ್ತು ಉದ್ಯೋಗ ವಿಭಾಗ ಜಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ದಾವಣಗೆರೆ

ಟೇಲರಿಂಗ್‌ ಮಾಡಿ ಓದಿಸಿದ ತಾಯಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವಮಾಚೋಹಳ್ಳಿ ಗ್ರಾಮದಲ್ಲಿ ಟೇಲರಿಂಗ್‌ ಕೆಲಸ ಮಾಡುವ ಭಾಗ್ಯಶ್ರೀ ಅವರ ಪುತ್ರ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಮೆಕ್ಯಾನಿಕಲ್‌ ವಿಭಾಗದ ಕಾರ್ತಿಕ್‌ ಎಲ್‌. ಏಳು ಚಿನ್ನದ ‍ಪದಕ ಪಡೆದರು. ‘ನಾನು ಅನಕ್ಷರಸ್ಥೆ. ಊರಲ್ಲೇ ಟೇಲರಿಂಗ್‌ ಕೆಲಸ ಮಾಡಿ ಬರುವ ಅತ್ಯಲ್ಪ ಹಣದಲ್ಲೇ ಒಂದಿಷ್ಟು ಕೂಡಿಟ್ಟು ಓದಿಸಿದ್ದೆ. ಮಗನ ಸಾಧನೆ ಎಲ್ಲ ನೋವುಗಳನ್ನು ಮರೆಯಿಸಿದೆ’ ಎಂದು ಭಾಗ್ಯಶ್ರೀ ಹೇಳಿದರು. ‘ಈ ಸಾಧನೆ ನನ್ನದಲ್ಲ ಎಲ್ಲವೂ ತಾಯಿಯದ್ದು’ ಎಂದು ಕಾರ್ತಿಕ್‌ ತಿಳಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ.ವಿ.ನಾರಾಯಣನ್‌ ಎಕ್ಸೆಲ್‌ ಇಂಡಿಯಾ ಸಂಸ್ಥಾಪಕ ಪ್ರಶಾಂತ್‌ ಪ್ರಕಾಶ್‌ ಮತ್ತು ಬೆಂಗಳೂರಿನ ಎಟ್ರಿಯ ವಿಶ್ವವಿದ್ಯಾಲಯದ ಕುಲಾಧಿಪತಿ ಸಿ.ಎಸ್‌.ಸುಂದರ್‌ ರಾಜು ಅವರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ‘ಡಾಕ್ಟರ್‌ ಆಫ್‌ ಸೈನ್ಸ್‌’ ಪ್ರದಾನ ಮಾಡಿದರು.  ಕೇಂದ್ರ ಸರ್ಕಾರದ ಪ್ರಧಾನ ವೈದ್ಯಕೀಯ ಸಲಹೆಗಾರ ಪ್ರೊ.ಅಜಯ್‌ಕುಮಾರ್‌ ಸೂದ್‌ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.