ADVERTISEMENT

ವಿಟಿಯು ಘಟಿಕೋತ್ಸವ: ವಿಕ್ರಮ್‌ ಕಿರ್ಲೋಸ್ಕರ್‌ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 15:35 IST
Last Updated 20 ಫೆಬ್ರುವರಿ 2023, 15:35 IST
ವಿಕ್ರಮ್‌ ಕಿರ್ಲೋಸ್ಕರ್‌
ವಿಕ್ರಮ್‌ ಕಿರ್ಲೋಸ್ಕರ್‌   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವ ಫೆ. 24ರಂದು ಬೆಳಿಗ್ಗೆ 10.30ಕ್ಕೆ ಜ್ಞಾನಸಂಗಮ ಆವರಣದಲ್ಲಿರುವ ಡಾ.ಎ.ಪಿ.ಜೆ ಅಬ್ದುಲ್‌ ಕಲಾಂ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದ ಅವರು, ‘ಔದ್ಯೋಗಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಈ ಬಾರಿ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ. ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ನ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ (ಮರಣೋತ್ತರ), ವೆಬ್ಕೊ ಇಂಡಿಯಾ ಲಿಮಿಟೆಡ್‌ ಹಾಗೂ ಟಿವಿಎಸ್‌ ಆಟೊಮೆಟಿವ್‌ ಸಲ್ಯೂಷನ್ಸ್‌ನ ಪ್ರೈವೇಟ್‌ ಲಿಮಿಟೆಡ್‌ ಅಧ್ಯಕ್ಷ ಎಂ.ಲಕ್ಷ್ಮೀನಾರಾಯಣ್‌, ಬೆಲಗಮ್‌ ಫೆರೊಕಾಸ್ಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ಸಚಿನ್‌ ಸಬ್ನಿಸ್‌ ಗೌರವ ಡಾಕ್ಟರೇಟ್‌ ಪಡೆಯಲಿದ್ದಾರೆ’ ಎಂದರು.

‘ಒಟ್ಟು 62,228 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಹಾಗೂ 701 ಮಂದಿಗೆ ಪಿಎಚ್‌.ಡಿ ಪ್ರದಾನ ಮಾಡಲಾಗುವುದು. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವಥ್‌ ನಾರಾಯಾಣ ಅತಿಥಿಗಳಾಗಿ ಭಾಗವಹಿಸುವರು. ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್‌ ಘಟಿಕೋತ್ಸವ ಭಾಷಣ ಮಾಡುವರು’ ಎಂದರು.

ADVERTISEMENT

10 ದಿನಗಳಲ್ಲೇ ಫಲಿತಾಂಶ

‘ವಿಟಿಯು ಯಾವುದೇ ಸೆಮಿಸ್ಟರ್‌ ಪರೀಕ್ಷೆ ಮುಗಿದ 10 ದಿನಗಳ ಒಳಗಾಗಿ ಫಲಿತಾಂಶ ನೀಡುವ ಪದ್ಧತಿ ಜಾರಿ ಮಾಡಲಾಗಿದೆ. ವಿಳಂಬವಾದರೆ ವಿದ್ಯಾರ್ಥಿಗಳು ಇತರೇ ಅವಕಾಶಗಳಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಪದ್ಧತಿ ಅಳವಡಿಸಿಕೊಂಡು, ಯಶಸ್ವಿಯಾಗಿದ್ದೇವೆ’ ಎಂದೂ ಅವರು ತಿಳಿಸಿದರು.

ಕ್ಯಾಲೆಂಡರ್‌ ಹೊಂದಾಣಿಕೆ: ‘ವಿಶ್ವದ ಬೇರೆಬೇರೆ ಕಡೆಯ ಅವಕಾಶಗಳು ನಮ್ಮ ಪದವೀಧರರ ಕೈ ತಪ್ಪಬಾರದು ಎಂಬ ಕಾರಣಕ್ಕೆ, ವಿಟಿಯು ಶೈಕ್ಷಣಿಕ ಕ್ಯಾಲೆಂಡರ್‌ ಹೊಂದಾಣಿಕೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಎಐಸಿಟಿಇ ಜತೆಗೆ ಚರ್ಚೆ ಕೂಡ ಮಾಡಲಾಗಿದೆ. ಆದಷ್ಟು ಬೇಗ ‘ಅಕಾಡೆಮಿಕ್‌ ಕ್ಯಾಲೆಂಡರ್‌’ ಬದಲಾವಣೆ ಮಾಡಲಿದ್ದೇವೆ ಎಂದೂ ಅವರು ವಿವರಿಸಿದರು.
**

ಮುರಳಿಗೆ 18 ಚಿನ್ನದ ಪದಕ!

ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ ಎಸ್‌.ಮುರಳಿ ಅವರು ಒಟ್ಟು 18 ಚಿನ್ನದ ಪದಕ ಪಡೆದು, ವಿಶ್ವವಿದ್ಯಾಲಯಕ್ಕೆ ಟಾಪರ್‌ ಆಗಿದ್ದಾರೆ. ಒಬ್ಬನೇ ವಿದ್ಯಾರ್ಥಿ ಇಷ್ಟು ಚಿನ್ನದ ಪದಕ ಪಡೆದಿದ್ದು ವಿಟಿಯು 25 ವರ್ಷಗಳ ಇತಿಹಾಸದಲ್ಲೇ ದಾಖಲೆ ಎಂದು ಪ್ರೊ.ವಿದ್ಯಾಶಂಕರ ತಿಳಿಸಿದರು.
**
‘ಅನುತ್ತೀರ್ಣರಿಗೆ ಸುವರ್ಣಾವಕಾಶ’

‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಈ ಬಾರಿ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದೆ. ಇದರ ಅಂಗವಾಗಿ ಪದವಿ ಅಪೂರ್ಣವಾದವರಿಗೆ ‘ಸುವರ್ಣ ಅವಕಾಶ’ ನೀಡಲಾಗುತ್ತಿದೆ. ಎಷ್ಟೇ ವರ್ಷಗಳ ಹಿಂದೆ, ಎಷ್ಟೇ ವಿಷಯಗಳು ಅಪೂರ್ಣ ಆಗಿದ್ದರೂ ಈಗ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ’ ಎಂದು ಪ್ರೊ.ವಿದ್ಯಾಶಂಕರ ಎಂದರು.

‘ಫೆಬ್ರುವರಿ ಅಂತ್ಯದಲ್ಲೇ ಇದರ ಎಲ್ಲ ವಿವರಗಳನ್ನು ಜಾಲತಾಣದಲ್ಲಿ ನೀಡಲಾಗುವುದು. 9,159 ಬಿಇ ವಿದ್ಯಾರ್ಥಿಗಳು, 1,247 ಎಂ.ಟೆಕ್‌ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಪದವಿಗಳ ಒಟ್ಟು 13,329 ಮಂದಿ ತಮ್ಮ ಪದವಿ ಅಪೂರ್ಣ ಮಾಡಿದ್ದಾರೆ. ಇವರನ್ನೂ ಪದವೀಧರ ಎಂದು ಹೇಳಿಕೊಳ್ಳುವಂತೆ ಮಾಡಲು ವಿಶೇಷ ಪರೀಕ್ಷೆ ನಡೆಸಲಾಗುವುದು’ ಎಂದೂ ಹೇಳಿದರು.

–––

ವಿಟಿಯು: 62,228 ವಿದ್ಯಾರ್ಥಿಗಳಿಗೆ ಪದವಿ ಪ್ರದಾ
ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಫೆ.24ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ಸಾಧನೆ ತೋರಿದ 10 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುತ್ತಿದೆ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ತಿಳಿಸಿದರು.

‘ಬೆಂಗಳೂರಿನ ಎಸ್‌.ಮುರಳಿ ಅವರು 18 ಚಿನ್ನದ ಪದಕ ಪಡೆದು ಮೊದಲಿಗರಾಗಿದ್ದಾರೆ. ಕುರಂಜಿ ವೆಂಕಟರಮನ್ ಗೌಡ ಕಾಲೇಜು ಆಫ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಎಸ್.ಕೃತಿ 8 ಚಿನ್ನದ ಪದಕ, ಬೆಂಗಳೂರು ಎ.ಸಿ.ಎಸ್. ಕಾಲೇಜ್‌ ಆಫ್ ಎಂಜಿನಿಯರಿಂಗ್‌ಮ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದ ಎಸ್.ಸ್ವಾತಿ 7 ಚಿನ್ನದ ಪದಕ ಪಡೆದು ನಂತರದ ಸ್ಥಾನದಲ್ಲಿದ್ದಾರೆ.‌

ಅದೇ ರೀತಿ, ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಎಸ್.ವಿ.ಸುಶ್ಮಿತಾ 6 ಚಿನ್ನದ ಪದಕ, ಬಿ.ಎನ್.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಪೂಜಾ ಬಾಸ್ಕೇರ 6, ಬೆಂಗಳೂರಿನ ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್‌ಸ್ಟ್ರುಮೆಂಟೇಷನ್‌ ವಿಭಾಗದ ಎಂ.ಅಭಿಲಾಷ 4, ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಇನ್ಫರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದ ಯುವಿಕಾ ರಮೇಶ್‌ಬಾಬು 4, ಆರ್.ಎನ್.ಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಎಂಬಿಎ ವಿಭಾಗದ ಜೆ.ಹರ್ಷವರ್ಧಿನಿ 4, ಬಿಎಂಎಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಯು.ಕೆ.ಅರ್ಜುನ್‌ 3 ಹಾಗೂ ದಾವಣಗೆರೆ ಯುಬಿಟಿಡಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂ.ಟೆಕ್ ವಿಭಾಗದ ಜಿ.ಆರ್.ಸಂಗೀತ 2 ಚಿನ್ನದ ಪದಕ ಪಡೆದಿದ್ದಾರೆ ಎಂದರು.
*
ಪರಿಶಿಷ್ಟ ವಿದ್ಯಾರ್ಥಿಗಳತ್ತ ಗಮನ: ‍

‘ಮುಂದಿನ ವರ್ಷದಿಂದ ಪರಿಶಿಷ್ಟ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ವಿಶೇಷ ಆದ್ಯತೆ ನೀಡಿ, ಆನ್‌ಲೈನ್‌ನಲ್ಲಿ ತರಗತಿ ನೀಡಲು ಉದ್ದೇಶಿಸಲಾಗಿದೆ’ ಎಂದು ಪ್ರೊ.ವಿದ್ಯಾಶಂಕರ ತಿಳಿಸಿದರು.

‘ಪ್ರಸಕ್ತ ವರ್ಷ 9893 ಪರಿಶಿಷ್ಟ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6123 ಮಂದಿ ಪಾಸಾಗಿದ್ದಾರೆ. ಶೇ 61.89ರಷ್ಟು ಮಾತ್ರ ಫಲಿತಾಂಶ ಬಂದಿದೆ. ಸಮಗ್ರ ಫಲಿತಾಂಶಕ್ಕೆ ಹೋಲಿಸಿದರೆ ಇದು ಕಡಿಮೆ. ಹೀಗಾಗಿ, ಯಾರಾದರೂ ವಿದ್ಯಾರ್ಥಿಗಳು ತರಗತಿಗಳು ಕೈತಪ್ಪಿದ್ದರೆ ಮರು ಕಲಿಕೆಗೆ ಆನ್‌ಲೈನ್‌ ಅನುಕೂಲತೆ ಮಾಡಿಕೊಡಲು ಚಿಂತನೆ ನಡೆಸಲಾಗಿದೆ’ ಎಂದರು.

ಕುಲಸಚಿವ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವ ಟಿ.ಎನ್. ಶ್ರೀನಿವಾಸ ಅವರೂ ಇದ್ದರು.
*
‘ಜಂಟಿ ಪದವಿ’ ನೀಡಲು ತಯಾರಿ

‘ವಿಟಿಯು ಹಾಗೂ ವಿವಿಧ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ‍ಪ್ರಕಾರ ನಮ್ಮಲ್ಲಿನ ವಿದ್ಯಾರ್ಥಿಗಳಿಗೆ ಜಂಟಿ ಪದವಿ ನೀಡಲು ನಿರ್ಧರಿಸಲಾಗಿದೆ’ ಎಂದು ಪ್ರೊ.ವಿದ್ಯಾಶಂಕರ ಹೇಳಿದರು.

‘ಈಗಾಗಲೇ ಜರ್ಮನಿ, ಜಪಾನ್‌, ಅಮೆರಿಕ ಸೇರಿದಂತೆ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ತಜ್ಞರು ಬಂದು ಒಡಂಬಡಿಕೆ ಒಪ್ಪಿಕೊಂಡು ಹೋಗಿದ್ದಾರೆ. ಇದರ ಪ್ರಕಾರ ಎರಡು ವರ್ಷ ನಾವು ಪಾಠ ಮಾಡುತ್ತೇವೆ. ಇನ್ನೆರಡು ವರ್ಷ ವಿದೇಶಿ ವಿ.ವಿ.ಗಳ ‍ಪ್ರಾಧ್ಯಾಪಕರು ಪಾಠ ಮಾಡುತ್ತಾರೆ. ಎರಡನ್ನೂ ಪರಿಗಣಿಸಿ ಜಂಟಿ ಪದವಿ ನೀಡಲಾಗುತ್ತದೆ. ವಿಶ್ವದ ಯಾವುದೇ ಭಾಗದಲ್ಲೂ ಅದು ಮಾನ್ಯವಾಗಲಿದೆ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.