ADVERTISEMENT

ಬೆಳಗಾವಿ| ವಿಟಿಯು: ಎಂಜಿನಿಯರಿಂಗ್‌ ಅಂತಿಮ ಸೆಮಿಸ್ಟರ್‌ ಪರೀಕ್ಷೆ ಆ.17ರಿಂದ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:22 IST
Last Updated 24 ಜುಲೈ 2020, 19:22 IST
ಡಾ.ಕರಿಸಿದ್ದಪ್ಪ
ಡಾ.ಕರಿಸಿದ್ದಪ್ಪ   

ಬೆಳಗಾವಿ: ‘ಎಂಜಿನಿಯರಿಂಗ್‌ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಕೊನೆಯ ಸೆಮಿಸ್ಟರ್‌ ಪರೀಕ್ಷೆಯನ್ನು ಆಗಸ್ಟ್‌ 17ರಿಂದ ಆಯಾ ಕಾಲೇಜುಗಳಲ್ಲಿಯೇ ನಡೆಸಲಾಗುವುದು. ಕೋವಿಡ್‌–19 ಹಿನ್ನೆಲೆಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಪಾಲಕರು ಆತಂಕಕ್ಕೊಳಗಾಗಬಾರದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

ಶುಕ್ರವಾರ ಸಂಜೆ ಫೇಸ್‌ಬುಕ್‌ ಮೂಲಕ ಹೇಳಿಕೆ ನೀಡಿರುವ ಅವರು, ‘ಆಗಸ್ಟ್‌ 17ರಿಂದ ಪ್ರಾಜೆಕ್ಟ್‌ ವೈವಾ ಆರಂಭಗೊಳ್ಳುತ್ತವೆ. 25ರಿಂದ ಥಿಯರಿ ಪರೀಕ್ಷೆಗಳು ನಡೆಯುತ್ತವೆ. 4– 5 ದಿನಗಳಲ್ಲಿ ಮುಗಿದ ನಂತರ ಬ್ಯಾಕ್‌ಲಾಗ್‌ ಪರೀಕ್ಷೆಗಳು ಆರಂಭಗೊಳ್ಳುತ್ತವೆ. ಇವು ಸೆಪ್ಟೆಂಬರ್‌ 25ಕ್ಕೆ ಕೊನೆಗೊಳ್ಳುತ್ತವೆ’ ಎಂದು ಹೇಳಿದರು.

‘ಪರೀಕ್ಷೆ ನಡೆಸುವ ಮೊದಲು, ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಹಾಗೂ ಪುನರ್‌ಮನನ ಮಾಡಲು ಆಗಸ್ಟ್‌ 1ರಿಂದ 14 ರವರೆಗೆ ಕಾಲೇಜುಗಳಲ್ಲಿ ಪೂರ್ವಸಿದ್ಧತಾ ತರಗತಿಗಳನ್ನು ನಡೆಸಲಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಲಾಕ್‌ಡೌನ್‌ ಆರಂಭಗೊಳ್ಳುವ ಮೊದಲು ಕಾಲೇಜಿನಲ್ಲಿಯೇ ತರಗತಿಗಳನ್ನು ನಡೆಸಲಾಗಿತ್ತು. ನಂತರ ಆನ್‌ಲೈನ್‌ ಮೂಲಕವೂ ಸಾಧ್ಯವಾದಷ್ಟರ ಮಟ್ಟಿಗೆ ಪಠ್ಯಕ್ರಮ ಪೂರ್ಣಗೊಳಿಸಲು ಉಪನ್ಯಾಸಕರು ಶ್ರಮಿಸಿದ್ದಾರೆ. ಇನ್ನುಳಿದ ವಿಷಯಗಳನ್ನು 14 ದಿನಗಳ ಪುನರ್‌ಮನನ ಅವಧಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬಹುದಾಗಿದೆ’ ಎಂದು ತಿಳಿಸಿದರು.

ಆನ್‌ಲೈನ್‌ ಪರೀಕ್ಷೆ ಇಲ್ಲ:‘ಕೆಲವರು ಆನ್‌ಲೈನ್‌ ಪರೀಕ್ಷೆ ನಡೆಸಲು ಸಲಹೆ ನೀಡಿದ್ದರು. ಆದರೆ, ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಇದು ಸಾಧ್ಯವಾಗದು. ಸುಮಾರು 61 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇವರಿಗೆಲ್ಲ ಆನ್‌ಲೈನ್‌ ಪರೀಕ್ಷೆ ನಡೆಸುವುದು ಸುಲಭವಲ್ಲ. ಅದಕ್ಕಾಗಿ ಆನ್‌ಲೈನ್‌ ಪರೀಕ್ಷೆ ನಡೆಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕ್ವಾರಂಟೈನ್‌ ಅವಧಿ:‘ರಾಜ್ಯದೊಳಗಿನ ವಿದ್ಯಾರ್ಥಿಗಳಿಗೆ ಸಂಚರಿಸಲು ಯಾವುದೇ ನಿರ್ಬಂಧವಿಲ್ಲ. ಹೊರರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ 14 ದಿನ ಹೋಮ್‌ ಕ್ವಾರಂಟೈನ್‌ ಆಗಬೇಕು. ಜ್ವರ ಅಥವಾ ಬೇರಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗುವುದು. ವೈದ್ಯಕೀಯ ಪರೀಕ್ಷೆ ಕೈಗೊಳ್ಳಲು ಅನುಕೂಲವಾಗಲು ಪರೀಕ್ಷೆ ಆರಂಭವಾಗುವುದಕ್ಕಿಂತ ಮುಂಚೆ ಒಂದೂವರೆ ಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಬರಬೇಕು’ ಎಂದು ವಿನಂತಿ ಮಾಡಿದರು.

‘ಹಾಗೊಂದು ವೇಳೆ, ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ತೆಗೆದುಕೊಳ್ಳಬಹುದು. ಅದನ್ನು ಮೊದಲ ಪ್ರಯತ್ನವೆಂದು ಪರಿಗಣಿಸಲಾಗುವುದು’ ಎಂದು ಹೇಳಿದರು.

ನಿಮ್ಮ ಮಕ್ಕಳಂತೆ ನೋಡಿಕೊಳ್ಳಿ:‘ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಶಿಕ್ಷಣ ಸಂಸ್ಥೆಗಳ ಮ್ಯಾನೇಜ್‌ಮೆಂಟ್‌ಗಳು ನೋಡಿಕೊಳ್ಳಬೇಕು. ಹಾಸ್ಟೆಲ್‌ಗಳನ್ನು ಶುಚಿಯಾಗಿಡಬೇಕು, ಉತ್ತಮ ಗುಣಮಟ್ಟದ ಆಹಾರ ನೀಡಬೇಕು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಕಷಾಯ್‌ ನೀಡಬೇಕು, ಧೈರ್ಯ ತುಂಬುವ ಕೆಲಸ ಮಾಡಬೇಕು. ಪ್ರತಿಯೊಂದು ಕ್ಯಾಂಪಸ್‌ನಲ್ಲಿ ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾಸ್ಕ್‌, ಸ್ಯಾನಿಟೈಸರ್‌, ಕೈಗವುಸು ನೀಡಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ಕೊಠಡಿಯಲ್ಲಿ ಕೂರಿಸಬೇಕು’ ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.