ADVERTISEMENT

ವಿಟಿಯು: ಪರಿಣಾಮಕಾರಿ ಇಂಟರ್ನ್‌ಶಿಪ್‌ಗೆ ಆದ್ಯತೆ

ಇಮಾಮ್‌ಹುಸೇನ್‌ ಗೂಡುನವರ
Published 10 ಜುಲೈ 2025, 23:42 IST
Last Updated 10 ಜುಲೈ 2025, 23:42 IST
<div class="paragraphs"><p>ವಿಟಿಯು</p></div>

ವಿಟಿಯು

   

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) 2025–26ನೇ ಸಾಲಿನಿಂದ ಎಲ್ಲ ವಿಭಾಗಗಳ ಸ್ನಾತಕ ಕೋರ್ಸ್‌ಗಳ ಪಠ್ಯಕ್ರಮದಲ್ಲಿ ಹೊಸ ಮಾದರಿಯ ಇಂಟರ್ನ್‌ಶಿಪ್ ಕಾರ್ಯಕ್ರಮ ಪರಿಚಯಿಸಿದೆ.

ಈ ಹಿಂದೆ ಸ್ನಾತಕ ಕೋರ್ಸ್‌ಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮಿಷ್ಟದ ಕಂಪನಿಗೆ ಹೋಗಿ ಇಂಟರ್ನ್‌ಶಿಪ್‌ ಮಾಡಿ, ಪ್ರಮಾಣಪತ್ರ ಸಲ್ಲಿಸುತ್ತಿದ್ದರು. ಇದರಿಂದ ಈ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗುತ್ತಿರಲಿಲ್ಲ.

ADVERTISEMENT

ಇಂಟರ್ನ್‌ಶಿಪ್‌ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೆಲವಷ್ಟು ತಕರಾರು, ಅಪವಾದಗಳು ಬಂದಿದ್ದರಿಂದ ವಿಶ್ವವಿದ್ಯಾಲಯವು ನಿಗಾ ಇರಿಸಲು ಬಯಸಿದೆ. ವಿದ್ಯಾರ್ಥಿಗಳಲ್ಲಿ ವೃತ್ತಿಕೌಶಲ ಅಭಿವೃದ್ಧಿಪಡಿಸಲು ಪರಿಣಾಮಕಾರಿಯಾಗಿ ಇಂಟರ್ನ್‌ಶಿಪ್‌ ಮಾಡಿಸಲು ಉದ್ದೇಶಿಸಿದೆ.

2025–26ನೇ ಸಾಲಿನ ತರಗತಿ ಆಗಸ್ಟ್‌ನಿಂದ ಆರಂಭವಾಗಲಿದ್ದು, ಸುಮಾರು 80 ಸಾವಿರ ವಿದ್ಯಾರ್ಥಿಗಳು ಬಿ.ಇ, ಬಿ.ಟೆಕ್‌, ಬಿ.ಪ್ಲ್ಯಾನ್‌, ಬಿ.ಎಸ್ಸಿ(ಆನರ್ಸ್), ಬಿ.ಆರ್ಕ್‌ ಅಂತಿಮ ವರ್ಷದಲ್ಲಿ ಓದಲಿದ್ದಾರೆ. ಈ ಪೈಕಿ ಅರ್ಧದಷ್ಟು ವಿದ್ಯಾರ್ಥಿಗಳು ಏಳನೇ ಮತ್ತು ಉಳಿದವರು ಎಂಟನೇ ಸೆಮಿಸ್ಟರ್‌ನಲ್ಲಿ ಇಂಟರ್ನ್‌ಶಿಪ್‌ ಮಾಡಲಿದ್ದಾರೆ.

‘ಇಂಟರ್ನ್‌ಶಿಪ್ ಮಾಡುವ ವಿದ್ಯಾರ್ಥಿಗಳ ನೋಂದಣಿಗೆ ವೆಬ್‌ಸೈಟ್‌ ಪುಟ ಸಿದ್ಧಪಡಿಸಿದ್ದೇವೆ. ಭಾರತ ಅಲ್ಲದೇ ವಿಶ್ವದಾದ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ವಿದ್ಯಾರ್ಥಿ ಇದರಲ್ಲಿ ನೋಂದಾಯಿಸಿಕೊಂಡೇ, ಇಂಟರ್ನ್‌ಶಿಪ್‌ ಮಾಡುವುದು ಕಡ್ಡಾಯ. ತರಗತಿ ಆರಂಭವಾದ ತಕ್ಷಣ, ವೆಬ್‌ಸೈಟ್‌ ಪುಟದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರವಾಗಿ ಮಾಹಿತಿ ನೀಡುತ್ತೇವೆ’ ಎಂದು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಪುಟದಲ್ಲಿ ವಿವಿಧ ಕಂಪನಿಗಳು ನೇರವಾಗಿ ಇಂಟರ್ನ್‌ಶಿಪ್ ಅವಕಾಶಗಳನ್ನು ಪೋಸ್ಟ್ ಮಾಡಬಹುದು. ನೋಂದಾಯಿತ ವಿದ್ಯಾರ್ಥಿಗಳ ಪ್ರೊಫೈಲ್‌ ವೀಕ್ಷಿಸಬಹುದು. ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌(ಎಐಸಿಟಿಇ) ಮತ್ತು ವಿಟಿಯು ಮಾರ್ಗಸೂಚಿ ಅನುಸಾರ ಹೊಸ ಪದ್ಧತಿಯಡಿ ಪ್ರಕ್ರಿಯೆ ನಡೆಯಲಿದೆ. ಇದರಿಂದ ಪ್ರತಿ ವಿದ್ಯಾರ್ಥಿ ಇಂಟರ್ನ್‌ಶಿಪ್ ಮೇಲೆ ಮೇಲ್ವಿಚಾರಣೆ ಮಾಡಲು ಅನುಕೂಲವಾಗಲಿದೆ’ ಎಂದರು. 

ಈ ಹಿಂದೆ ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ ಕುರಿತು ಮೇಲ್ವಿಚಾರಣೆ ಮಾಡಲು ಆಗುತ್ತಿರಲಿಲ್ಲ. ಈಗ ಇಡೀ ಪ್ರಕ್ರಿಯೆ ಮೇಲೆ ನಿಗಾ ವಹಿಸಲಿದ್ದೇವೆ
ಪ್ರೊ.ಎಸ್‌.ವಿದ್ಯಾಶಂಕರ ಕುಲಪತಿ ವಿಟಿಯು

ವಿಟಿಯು ವ್ಯಾಪ್ತಿಯಲ್ಲಿ 3 ಲಕ್ಷ ವಿದ್ಯಾರ್ಥಿಗಳು

ವಿಟಿಯು ವ್ಯಾಪ್ತಿಯಲ್ಲಿ ರಾಜ್ಯದಲ್ಲಿ 215 ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್‌ ಕಾಲೇಜುಗಳಿವೆ. ಅವುಗಳಲ್ಲಿ 39 ಸ್ವಾಯತ್ತ ಕಾಲೇಜು 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜು 25 ಆರ್ಕಿಟೆಕ್ಚರ್‌ ಸ್ಕೂಲ್‌ ಮತ್ತು ಎರಡು ಘಟಕ ಮಹಾವಿದ್ಯಾಲಯಗಳಿವೆ. ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಡಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.