ADVERTISEMENT

ಐಐಟಿ ದರ್ಜೆಗೆ ವಿಟಿಯು ಸುಧಾರಣೆ- ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 12:44 IST
Last Updated 30 ಏಪ್ರಿಲ್ 2022, 12:44 IST
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ದರ್ಜೆಗೆ ಏರಿಸುವ ನಿಟ್ಟಿನಿಲ್ಲಿ ಸಿದ್ಧಪಡಿಸಿರುವ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶನಿವಾರ ಸಲ್ಲಿಸಿ, ಸತ್ಕರಿಸಿದರು
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಐಐಟಿ ದರ್ಜೆಗೆ ಏರಿಸುವ ನಿಟ್ಟಿನಿಲ್ಲಿ ಸಿದ್ಧಪಡಿಸಿರುವ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಕುಲಪತಿ ಪ್ರೊ.ಕರಿಸಿದ್ದಪ್ಪ ಶನಿವಾರ ಸಲ್ಲಿಸಿ, ಸತ್ಕರಿಸಿದರು   

ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವನ್ನು ಸಮಗ್ರ ಸುಧಾರಣೆ ಮೂಲಕ ಐಐಟಿ ದರ್ಜೆಗೆ ಏರಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ವಿಟಿಯು ಮೇಲ್ದರ್ಜೆಗೇರಿಸುವ ಸಂಬಂಧ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರು ಮಾಡಿರುವ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಶನಿವಾರ ಸ್ವೀಕರಿಸಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ಜ್ಞಾನಾಧಾರಿತ ಸಮಾಜ ಕಟ್ಟುವ ನಿಟ್ಟಿನಲ್ಲಿ ವಿಟಿಯು ನೀತಿ ಮತ್ತು ಆಡಳಿತ ಎರಡನ್ನೂ ಸಮಗ್ರವಾಗಿ ಬದಲಾಯಿಸುವ ಅಗತ್ಯವಿದೆ. ಈ ಮೂಲಕ ವಿ.ವಿ.ಯನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ದೇಶದಲ್ಲಿರುವ ಐಐಟಿ, ಐಐಐಟಿ ಮತ್ತು ಎನ್ಐಟಿಗಳಂತಹ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಿಗೆ ಸದ್ಯದ ಅಗತ್ಯವನ್ನು ಸಂಪೂರ್ಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ನವಭಾರತ ಕಟ್ಟಲು ಹೆಚ್ಚಿನ ಸಂಖ್ಯೆಯಲ್ಲಿ ಬೇಕಾಗಿರುವ ದಕ್ಷ, ಜ್ಞಾನವುಳ್ಳ, ವೃತ್ತಿಪರ ತರಬೇತಿ ಹೊಂದಿದ ಕೌಶಲಪೂರ್ಣ ಸಿಬ್ಬಂದಿ ಅತ್ಯಗತ್ಯವಾಗಿದ್ದಾರೆ. ಇದನ್ನು ನನಸು ಮಾಡುವುದಕ್ಕೆ ತಕ್ಕಂತೆ ವಿಟಿಯು ಅನ್ನು ಬೆಳೆಸಲಾಗುವುದು’ ಎಂದರು.

‘ವಿಟಿಯುನಲ್ಲಿ ಇನ್ನು ಮುಂದೆ ಗುಣಮಟ್ಟ ಮತ್ತು ಸಾಮರ್ಥ್ಯವೃದ್ಧಿ ಎರಡನ್ನೂ ಕಡ್ಡಾಯಗೊಳಿಸಲಾಗುವುದು. ಬೋಧನೆ ಮತ್ತು ಸಮಗ್ರ ಸಂಶೋಧನಾ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ನಡೆಯುವಂತಾಗಲು ತಂತ್ರಜ್ಞಾನ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ವಿಟಿಯು ಅಥವಾ ಬೇರಾವುದೆ ವೃತ್ತಿಪರ ಶಿಕ್ಷಣ ಸಂಸ್ಥೆಗಳೊಂದಿಗೆ ಇದುವರೆಗೂ ಉದ್ಯಮಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ, ಎನ್ಇಪಿಯಲ್ಲಿ ಇದಕ್ಕೆ ಆದ್ಯತೆ ಕೊಡಲಾಗಿದೆ. ಉದ್ಯಮಿಗಳೆ ನೇರವಾಗಿ ಬೋಧನಾ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಕೈಜೋಡಿಸಲು ಮುಕ್ತ ಅವಕಾಶವಿದೆ’ ಎಂದು ನುಡಿದರು.

‘ಸದ್ಯಕ್ಕೆ ದೇಶದ ಜಿಡಿಪಿಯ ಶೇ.0.69ರಷ್ಟು ಅತ್ಯಲ್ಪ ಪ್ರಮಾಣದ ಹಣವನ್ನು ಸಂಶೋಧನೆಗೆ ಮೀಸಲಿಡಲಾಗುತ್ತಿದೆ. ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ ಅಸ್ತಿತ್ವಕ್ಕೆ ತರುತ್ತಿದ್ದು, ಸಂಶೋಧನಾ ಚಟುವಟಿಕೆಗಳಿಗೆ ಸಾಕಷ್ಟು ಅನುದಾನ ಕೊಡಲಿದೆ. ಉತ್ಪಾದನಾ ವಲಯದಲ್ಲಿ ನಾವು ಆದಷ್ಟು ತ್ವರಿತವಾಗಿ 10ಕೋಟಿಗೂ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ’ ಎಂದು ಸಚಿವರು ಪ್ರತಿಪಾದಿಸಿದರು.

ಕುಲಸಚಿವರಾದ ಪ್ರೊ.ಎ.ಎಸ್. ದೇಶಪಾಂಡೆ, ಪ್ರೊ.ಬಿ.ಇ. ರಂಗಸ್ವಾಮಿ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಬೋಧಕರು ಮತ್ತು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.