ADVERTISEMENT

ಆದೇಶ ಉಲ್ಲಂಘಿಸಿ ತ್ಯಾಜ್ಯ ವಿಲೇವಾರಿ

ಆರೋಗ್ಯದ ಮೇಲೆ ದುಷ್ಪರಿಣಾಮ: ಸಾರ್ವಜನಿಕರ ಆಕ್ರೋಶ

ಸುಧಾಕರ ಎಸ್.ತಳವಾರ, ಬೆಂಗಳೂರು
Published 10 ಫೆಬ್ರುವರಿ 2021, 13:33 IST
Last Updated 10 ಫೆಬ್ರುವರಿ 2021, 13:33 IST
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಗ್ರಾಮ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಿರುವ ಚಿತ್ರ
ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಗ್ರಾಮ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಿರುವ ಚಿತ್ರ   

ಚಿಕ್ಕೋಡಿ: ಜನ ಮತ್ತು ಜಾನುವಾರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಬಾರದು ಎಂದು ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಉಲ್ಲಂಘಿಸಿ ತಾಲ್ಲೂಕಿನ ಕಬ್ಬೂರ ಪಟ್ಟಣ ಪಂಚಾಯ್ತಿಯು ಅದೇ ಜಾಗದಲ್ಲಿ ಕಸ ತಂದು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಬ್ಬೂರ ಗ್ರಾಮದ ರಿ.ಸ.ನಂ.654ನೇದ್ದರಲ್ಲಿನ 6 ಎಕರೆ ಜಮೀನನ್ನು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮಂಜೂರು ಮಾಡುವಂತೆ ಚಿಕ್ಕೋಡಿ ತಹಶೀಲ್ದಾರ್‌ 2018ರ ಸೆ.3ರಂದು ಕಬ್ಬೂರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯನ್ನು ಕೋರಿದ್ದರು.

ಆಕ್ಷೇಪ ಸಲ್ಲಿಕೆ:

ADVERTISEMENT

ಕಬ್ಬೂರ ಗ್ರಾಮದ ರಿ.ಸ.ನಂ.654ನೇದ್ದರಲ್ಲಿನ 6 ಎಕರೆ ಜಮೀನನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಗೊಳಿಸಲು ಯಾವುದೇ ವ್ಯಕ್ತಿಗಳಿಂದ ಆಕ್ಷೇಪಣೆ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ 90 ದಿನಗಳ ಒಳಗಾಗಿ ಲಿಖಿತವಾಗಿ ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರರಲ್ಲಿ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿತ್ತು. ಈ ಪ್ರಕಟಣೆಗೆ ಅನುಗುಣವಾಗಿ ಭೀಮಗೌಡ ಶಂಕರ ಖೋತ್ ಎನ್ನುವವರು ಮೀರಾಪುರಹಟ್ಟಿ ಮತ್ತು ಲಕ್ಷ್ಮೀಕೋಡಿ ಗ್ರಾಮಸ್ಥರ ಪರವಾಗಿ ತಕರಾರು ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಪ್ರಕಟಣೆಗೂ ಮುನ್ನವೆ ಲಕ್ಷ್ಮಣ ಹುದೇಡ ಎನ್ನುವವರು ಆಕ್ಷೇಪಣೆ ಸಲ್ಲಿಸಿದ್ದರು.

ಜನ ಜಾನುವಾರುಗಳ ಆರೋಗ್ಯಕ್ಕೆ ಮಾರಕ:

‘ಕಬ್ಬೂರ ಗ್ರಾಮದ ರಿ.ಸ.ನಂ.654ನೇದ್ದರಲ್ಲಿ ಸಾರ್ವಜನಿಕ ರಸ್ತೆಗಳು, ಬಾವಿ, ಕೆರೆ, ಮರಡಿ, ಸೀಮೆ ರಸ್ತೆ ಇದ್ದು, ಮೀರಾಪುರಹಟ್ಟಿ ಮತ್ತು ಲಕ್ಷ್ಮೀಕೋಡಿಗಳ ನಿವಾಸಿಗಳಿಗೆ ಈ ರಸ್ತೆಗಳೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿ ಮಹಾಲಕ್ಷ್ಮಿ ದೇವಸ್ಥಾನವೂ ಇದೆ. ಇಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿರುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಜನ–ಜಾನುವಾರು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ಸ್ಥಳದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಆಕ್ಷೇಪಣೆ ಅರ್ಜಿಯಲ್ಲಿ ಕೋರಲಾಗಿತ್ತು’ ಎಂದು ವಕೀಲ ಭೀಮಗೌಡ ಖೋತ್ ಹೇಳುತ್ತಾರೆ.

ಡಿಸಿ ಆದೇಶ

ಸ್ವೀಕೃತಗೊಂಡ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜನ ಮತ್ತು ಜಾನುವಾರು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಉದ್ದೇಶಿತ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಸಲ್ಲಿಸಿರುವ ಪ್ರಸ್ತಾವವನ್ನು ಬಿಟ್ಟು, ಬೇರೆಡೆ ಜಮೀನು ಗುರುತಿಸಿ ಪ್ರಸ್ತಾವ ಸಲ್ಲಿಸುವಂತೆ ಹೋದ ವರ್ಷ ಡಿಸೆಂಬರ್‌ನಲ್ಲಿ ಆದೇಶ ನೀಡಿದ್ದಾರೆ.

‘ನಾನು ಒಂದೂವರೆ ತಿಂಗಳ ಹಿಂದೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಸಂಬಂಧಿತ ಕಡತವನ್ನು ಪರಿಶೀಲಿಸಿ ವರದಿ ನೀಡುತ್ತೇನೆ’ ಎಂದು ಕಬ್ಬೂರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ವಿ.ಬಿ. ಸೊಗಲದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.