ADVERTISEMENT

ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:54 IST
Last Updated 15 ಜೂನ್ 2019, 15:54 IST
ರಾಜಾಪುರ ಬ್ಯಾರೇಜ್‌ನಿಂದ ಶನಿವಾರ ನೀರು ಹೊರಬಿಡಲಾಯಿತು
ರಾಜಾಪುರ ಬ್ಯಾರೇಜ್‌ನಿಂದ ಶನಿವಾರ ನೀರು ಹೊರಬಿಡಲಾಯಿತು   

ಬೆಳಗಾವಿ: ನೆರೆಯ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಮುಂಜಾಗ್ರತಾ ಕ್ರಮವಾಗಿ 1,200ರಿಂದ 1,500 ಕ್ಯೂಸೆಕ್‌ ಅಡಿ ನೀರು ಹೊರಬಿಡಲಾಗುತ್ತಿದ್ದು, ಈ ನೀರು ಕೃಷ್ಣಾ ನದಿಯ ಮೂಲಕ ಶನಿವಾರ ಸಂಜೆ ರಾಜ್ಯ ಪ್ರವೇಶಿಸಿದೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಭಾರಿ ಪ್ರಮಾಣದಲ್ಲಿ ಮಳೆ ನೀರು ಹರಿದುಬರುವ ಸಾಧ್ಯತೆ ಇರುವುದರಿಂದ ಬ್ಯಾರೇಜ್‌ ಖಾಲಿ ಮಾಡುವ ಉದ್ದೇಶದಿಂದ ನೀರನ್ನು ಹೊರಬಿಡಲಾಗುತ್ತಿದೆ. ಇದಲ್ಲದೇ, ಅಥಣಿ ಹಾಗೂ ರಾಯಬಾಗ ತಾಲ್ಲೂಕಿನ ಜನರಿಗೆ ನೀರು ಪೂರೈಸುವ ಉದ್ದೇಶದಿಂದಲೂ ಹೊರಬಿಡಲಾಗುತ್ತಿದೆ.

62 ಗೇಟ್‌ಗಳ ಪೈಕಿ 14 ಗೇಟ್‌ಗಳನ್ನು ತೆರೆಯಲಾಗಿದೆ. ಬೆಳಿಗ್ಗೆ ನೀರು ಬಿಡಲಾಗಿದ್ದು, ಸಂಜೆ ಹೊತ್ತಿಗೆ ಚಿಕ್ಕೋಡಿ ತಾಲ್ಲೂಕಿನ ಇಂಗಳಗಿ ತಲುಪಿದೆ. 2– 3 ದಿನಗಳೊಳಗೆ ನೀರು ರಾಯಬಾಗ ತುದಿಯವರೆಗೂ ನೀರು ತಲುಪಲಿದೆ. ಚಿಕ್ಕೋಡಿ, ಅಥಣಿ ಹಾಗೂ ರಾಯಬಾಗ ಜನರ ನೀರಿನ ಕೊರತೆಯನ್ನು ನೀಗಿಸಲಿದೆ.

ADVERTISEMENT

ಕಟ್ಟೆಚ್ಚರ:

ನದಿ ನೀರನ್ನು ಕೇವಲ ಕುಡಿಯಲು ಬಳಸಬೇಕು. ಈ ನೀರನ್ನು ಕೃಷಿಗೆ ಬಳಸಬಾರದೆಂದು ಅಧಿಕಾರಿಗಳು ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ನೀರು ಬಳಸದಂತೆ ನದಿ ಪಾತ್ರದ ಹಳ್ಳಿಗಳ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಕರಲಿಂಗಣ್ಣವರ ಅವರು ಹೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ, ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡದಂತೆ ತಿಳಿಸಿದ್ದಾರೆ.

ಇತ್ತೀಚೆಗೆ ಇದೇ ಬ್ಯಾರೇಜ್‌ನಿಂದ 9 ಗೇಟುಗಳ ಮೂಲಕ ನೀರು ಬಿಡಲಾಗಿತ್ತು. ಈ ನೀರು ಚಿಕ್ಕೋಡಿ ತಾಲ್ಲೂಕಿನ ಹಲವು ಹಳ್ಳಿಗಳ ಜನರ ನೀರಿನ ಬವಣೆಯನ್ನು ನೀಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.