ADVERTISEMENT

‘ತಾಯಿಯಂತೆ ತ್ಯಾಗ ಗುಣ ಬೆಳೆಸಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 15:15 IST
Last Updated 15 ಜುಲೈ 2021, 15:15 IST
ಐಗಳಿಯ ಸಿಂದೂರ ವಸತಿಯಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಮಾತನಾಡಿದರು
ಐಗಳಿಯ ಸಿಂದೂರ ವಸತಿಯಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಯೋಗಾನಂದ ಸ್ವಾಮೀಜಿ ಮಾತನಾಡಿದರು   

ಐಗಳಿ (ಬೆಳಗಾವಿ ಜಿಲ್ಲೆ): ‘ತಾಯಿ ಮಾಡುವ ತ್ಯಾಗಕ್ಕಿಂತ ಯಾವುದೂ ದೊಡ್ಡದಿಲ್ಲ. ಆ ಗುಣವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಚಡಚಣದ ಯೋಗಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಸಿಂಧೂರ ವಸತಿಯಲ್ಲಿರುವ ಲಿಂ.ಅಪ್ಪಯ್ಯ ಸ್ವಾಮೀಜಿ ಜಾತ್ರೆ ಅಂಗವಾಗಿ ಸರಳವಾಗಿ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಸಾಯನಿಕ ಗೊಬ್ಬರವನ್ನು ಬಹಳ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದಾಗಿ ಭೂಮಿಯು ಫಲವತ್ತತೆ ಕಳೆದುಕೊಂಡಿದೆ. ಅದರಂತೆ ಮನುಷ್ಯನೂ ಸಾವಯವ ಊಟ ಬಿಟ್ಟು ಬೇರೆ ಊಟ ಮಾಡಿ ಸೇವನೆಯಿಂದ ಶರೀರ ಹಾಳು ಮಾಡಿಕೊಂಡಿದ್ದಾನೆ. ಇನ್ನಾದರೂ ಸಾವಯವ ಪದಾರ್ಥ, ಜವಾರಿ ಆಕಳಿನ ಹಾಲು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಗಳಿಸಿದ್ದರಲ್ಲಿ ಸ್ವಲ್ಪ ಭಾಗವನ್ನು ದಾಸೋಹಕ್ಕೆ ದಾನ ನೀಡಬೇಕು’ ಎಂದರು.

ADVERTISEMENT

ಕನ್ನಾಳದ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ನೈವೇದ್ಯ ಅರ್ಪಿಸಿದರು. ಸಿದ್ರಾಮ ಸಿಂಧೂರ, ಶ್ರೀಶೈಲದ ಕಡೆಬಾಗಿಲದ ಅನ್ನದಾಸೋಹ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ದಂಪತಿ, ಕಾರ್ಯದರ್ಶಿ ಸಿದ್ದಪ್ಪ ಬಿಸನಾಳ, ಮಲ್ಲಿಕಾರ್ಜುನ ಸಾತಲಗಾಂವ, ಎಂ.ಎಸ್. ಹಾಲಳ್ಳಿ, ಎನ್.ಎಂ. ಸಿಂಧೂರ, ಎಂ.ಬಿ. ನೇಮಗೌಡ, ಜಗದೀಶ ಕೋರಬು, ಸದಾಶಿವ ಬಿಜ್ಜರಗಿ ಇದ್ದರು.

ಕೆ.ಎಸ್. ಬಿರಾದಾರ ಸ್ವಾಗತಿಸಿದರು. ಮಲಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.