ADVERTISEMENT

ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಪ್ರಾಮಾಣಿಕತೆ ಅಗತ್ಯ: ಯಶೋಧಾ ವಂಟಗೋಡಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:11 IST
Last Updated 30 ಅಕ್ಟೋಬರ್ 2020, 11:11 IST
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಜಾಗೃತಿ ಸಪ್ತಾಹದಲ್ಲಿ ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿದರು
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಜಾಗೃತಿ ಸಪ್ತಾಹದಲ್ಲಿ ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಮಾತನಾಡಿದರು   

ಬೆಳಗಾವಿ: ‘ನಾವೆಲ್ಲರೂ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಕರ್ತವ್ಯ ನಿರ್ವಹಿಸಿದ್ದಲ್ಲಿ ಮಾತ್ರ ಸಮಾಜವನ್ನು ಕಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ’ ಎಂದು ಲೋಕಾಯುಕ್ತ ಎಸ್ಪಿ ಯಶೋಧಾ ವಂಟಗೋಡಿ ಹೇಳಿದರು.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಗುರುವಾರ ನಡೆದ ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಜಾಗೃತಿ ಸಪ್ತಾಹದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ನಮಗೆ ಜನ ಸೇವೆಯ ಜವಾಬ್ದಾರಿ ನೀಡಿದೆ. ಅದನ್ನು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಆಗ ಯೋಜನೆಗಳ ಲಾಭ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ. ಸರ್ಕಾರ ನೀಡಿರುವ ಕೆಲಸದೊಂದಿಗೆ ಭ್ರಷ್ಟಾಚಾರ ನಿರ್ಮೂಲನೆಗೂ ಆದ್ಯತೆ ಕೊಡಬೇಕು’ ಎಂದರು.

ADVERTISEMENT

‘ದುರಾಸೆಯಿಂದ ಹಣ ಹಾಗೂ ಆಸ್ತಿ ಗಳಿಕೆ ಮಾಡಿದ್ದಲ್ಲಿ ಒಂದಲ್ಲ ಒಂದು ದಿನ ಅದಕ್ಕೆ ತಕ್ಕ ಬೆಲೆ ಕಟ್ಟಬೇಕಾಗುತ್ತದೆ. ಅಕ್ರಮವಾಗಿ ಗಳಿಕೆಗೆ ಆಸೆ ಪಟ್ಟರೆ ಆಗಬಹುದಾದ ತೊಂದರೆಗಳನ್ನು ಅರಿಯಬೇಕು. ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದರು.

ಮಾಹಿತಿ ಹಕ್ಕು ಆಯೋಗದ ಆಯುಕ್ತೆ ಬಿ.ವಿ. ಗೀತಾ ಮಾತನಾಡಿ, ‘ಕೇಂದ್ರ ಜಾಗೃತ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಹಾಗೂ ಲೋಕಪಾಲ ಮಸೂದೆ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು’ ಎಂದರು.

4ನೇ ಹೆಚ್ಚುವರಿ ಜಿಲ್ಲಾ ಹಾಗೂ ವಿಶೇಷ ನ್ಯಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕ ಪ್ರವೀಣ ಅಗಸಗಿ ಮಾತನಾಡಿದರು. ಸುವರ್ಣಸೌಧದಲ್ಲಿರುವ 22 ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಡಿಎಸ್‌ಪಿ ಜೆ. ರಘು ಪ್ರತಿಜ್ಞಾವಿಧಿ ಬೋಧಿಸಿದರು.

ಸಂಚಾರ ಉತ್ತರ ಠಾಣೆಯ ಸಿಬ್ಬಂದಿ ಉದಯ್ ಪ್ರಾರ್ಥಿಸಿದರು. ಡಿಎಸ್‌ಪಿ ಬಿ.ಎಸ್. ಪಾಟೀಲ ಸ್ವಾಗತಿಸಿದರು. ಎಂ.ಎಸ್. ತೀರ್ಥ ನಿರೂಪಿಸಿದರು. ಇನ್‌ಸ್ಪೆಕ್ಟರ್ ರಫೀಕ್ ತಹಶೀಲ್ದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.