ಸತೀಶ್ ಜಾರಕಿಹೊಳಿ
ಬೆಳಗಾವಿ: ‘ನಾವು ಬಿಜೆಪಿಯವರ ಸಾಧನೆ ಬಗ್ಗೆ ಹೇಳುತ್ತಿಲ್ಲ. ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ಮಾಡಿದ ಸಾಧನೆ ತಿಳಿಸುತ್ತಿದ್ದೇವೆ. ನಮ್ಮ ಸಾಧನೆಗಳನ್ನು ಹೇಳಿದರೆ, ಅವರಿಗೇನು ಸಮಸ್ಯೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶಕ್ಕೆ ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತ ಪ್ರಶ್ನೆಗೆ, ಇಲ್ಲಿ ಭಾನುವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಬಿಜೆಪಿಯವರು ತಮ್ಮ ಸಾಧನೆ ಬಗ್ಗೆ ಹೇಳಲು ಬೇಡ ಎಂದವರು ಯಾರು? ದೇಶದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸರ್ಕಾರ 11 ವರ್ಷಗಳಲ್ಲಿ ಮಾಡಿರುವ ಸಾಧನೆ ಬಗ್ಗೆ ತಿಳಿಸಲಿ’ ಎಂದು ತಿರುಗೇಟು ಕೊಟ್ಟರು.
‘ರಾಜ್ಯದಲ್ಲಿ ಸಾಕಷ್ಟು ರೈತರು ಸತ್ತಿದ್ದಾರೆ. ಅವರ ಸಮಾಧಿ ಮೇಲೆ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿದೆ’ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಕ್ಕೆ, ‘ಅವರು ಹಾಗೆಯೇ ಹೇಳುತ್ತಾರೆ. ಬಿಜೆಪಿ ಅಧಿಕಾರವಧಿಯಲ್ಲೂ ಇಂಥ ಘಟನೆ ನಡೆದಿವೆ. ನಾವು ಸಾಧನೆ ಬಗ್ಗೆ ಹೇಳಲು ಹೊರಟಿದ್ದೇವೆಯೇ ಹೊರತು ವೈಫಲ್ಯದ ಬಗ್ಗೆ ಅಲ್ಲ’ ಎಂದರು.
‘ಡಿಸೆಂಬರ್‌ನಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುತ್ತದೆಯೇ’ ಎಂಬ ಪ್ರಶ್ನೆಗೆ, ‘ಡಿಸೆಂಬರ್ ಇನ್ನೂ ದೂರವಿದೆ. ಆಗ ನೋಡೋಣ’ ಎಂದರು.
ಕಾಂಗ್ರೆಸ್‌ನಲ್ಲಿ ಇರುವ ಹಿರಿಯ ಶಾಸಕರು ಸಚಿವರಾಗಲು ಆಕಾಂಕ್ಷೆ ವ್ಯಕ್ತಪಡಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸತೀಶ, ‘ನಮ್ಮ ಸರ್ಕಾರ 30 ತಿಂಗಳ ಅಧಿಕಾರವಧಿ ಪೂರೈಸಿದ ನಂತರ ಸಚಿವರಾಗಬೇಕು ಎಂದು ಬಹಳಷ್ಟು ಶಾಸಕರ ಒತ್ತಾಸೆ ಇದೆ. ಸಂಪುಟ ವಿಸ್ತರಣೆಯಾದರೆ ಎಲ್ಲರಿಗೂ ಅವಕಾಶ ಸಿಗುತ್ತದೆ. ಆದರೆ, ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ’ ಎಂದು ಹೇಳಿದರು.
‘ಸರ್ಕಾರದ ಮಟ್ಟದಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ಚರ್ಚೆ ಆಗಿದೆಯೇ’ ಎಂಬ ಪ್ರಶ್ನೆಗೆ, ‘ಯಾವ ಚರ್ಚೆ ಆಗಿಲ್ಲ. ಒಂದುವೇಳೆ ಸಂಪುಟ ವಿಸ್ತರಣೆಯಾದರೆ ಹೊಸ ಲೀಡರ್‌ಶಿಪ್ ಬೆಳೆಯುತ್ತದೆ’ ಎನ್ನುವ ಮೂಲಕ ಪರೋಕ್ಷವಾಗಿ ಸಂಪುಟ ವಿಸ್ತರಣೆಗೆ ಬೆಂಬಲ ಸೂಚಿಸಿದರು.
‘ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳ ಅಧಿಕಾರವಧಿ ಪೂರೈಸಿದ ನಂತರ ಗ್ಯಾರಂಟಿ ಯೋಜನೆ ಬಂದ್ ಆಗುತ್ತವೆ’ ಎಂಬ ಬಿಜೆಪಿಯವರ ಆರೋಪಕ್ಕೆ, ‘ನಾವು ಅಧಿಕಾರ ಹಿಡಿದ ಮೊದಲ ದಿನದಿಂದಲೇ ಗ್ಯಾರಂಟಿ ಯೋಜನೆ ಬಂದ್ ಆಗುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ, ಎರಡು ವರ್ಷಗಳಿಂದ ಅವು ಜಾರಿಯಲ್ಲಿವೆ. ಮುಂದಿನ ಮೂರು ವರ್ಷವೂ ಯಥಾಸ್ಥಿತಿ ಮುಂದುವರಿಯುತ್ತವೆ’ ಎಂದು ಹೇಳಿದರು.
‘ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸತೀಶ, ‘ಆ ತರಹ ಇಲ್ಲ. ಬಿಜೆಪಿಯವರು ಸುಳ್ಳು ಹೇಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದರು.
ರಾಜ್ಯದಲ್ಲಿ ಸಿ.ಎಂ ಬದಲಾವಣೆ ಕುರಿತ ಪ್ರಶ್ನೆಗೆ, ‘ಈ ಬಗ್ಗೆ ಬೆಂಗಳೂರಿನಲ್ಲೇ ಕೇಳಬೇಕು’ ಎಂದರು.
ಭಾರತೀಯ ಸೇನೆಯ ಯೋಧರ ಬಗ್ಗೆ ಬೇರೆ ರಾಜ್ಯಗಳ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕುರಿತ ಪ್ರಶ್ನೆಗೆ, ‘ಯಾರು ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆಯೋ, ಅವರನ್ನೇ ಕೇಳಬೇಕು. ನಾವೆಲ್ಲ ದೇಶದ ಸೈನಿಕರ ಬಗ್ಗೆ ವಿಶ್ವಾಸ ಇಡಬೇಕು. ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಿರಬೇಕು. ಈ ವಿಚಾರವಾಗಿ ನಾವು ಕೇಂದ್ರ ಸರ್ಕಾರದ ಜತೆಗೆ ಇರುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.