ADVERTISEMENT

ಪತ್ನಿ ಕುಟುಂಬದವರು ಕ್ಷೇಮ: ಕಲ್ಯಾಣ್ ಸಂತಸ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 14:47 IST
Last Updated 6 ಅಕ್ಟೋಬರ್ 2020, 14:47 IST
ಕೆ. ಕಲ್ಯಾಣ್
ಕೆ. ಕಲ್ಯಾಣ್   

ಬೆಳಗಾವಿ: ‘ವಂಚಕರ ಷಡ್ಯಂತ್ರಕ್ಕೆ ಸಿಲುಕಿದ್ದ ಪತ್ನಿ, ಅತ್ತೆ ಹಾಗೂ ಮಾವ ಪೊಲೀಸರ ಶ್ರಮದಿಂದಾಗಿ ಈಗ ಕ್ಷೇಮವಾಗಿದ್ದಾರೆ’ ಎಂದು ಚಲನಚಿತ್ರ ಗೀತರಚನೆಕಾರ ಕೆ. ಕಲ್ಯಾಣ್ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನನ್ನ ಕುಟುಂಬದ ನೆರವಿಗೆ ನಿಂತ ಪೊಲೀಸರಿಗೆ ಹಾಗೂ ವಾಸ್ತವಾಂಶವನ್ನು ಜನರಿಗೆ ತಲುಪಿಸಿದ ಮಾಧ್ಯಮದವರಿಗೂ ಧನ್ಯವಾದ ತಿಳಿಸುತ್ತೇನೆ’ ಎಂದರು.

‘ಪತ್ನಿ, ಅತ್ತೆ ಹಾಗೂ ಮಾವ ನಾಪತ್ತೆ ಆಗಿದ್ದರಿಂದ ನಾನು ಪೊಲೀಸರಿಗೆ ದೂರು ನೀಡಿದ್ದೆ. ಅವರು ಆರೋಪಿ, ಮಂತ್ರವಾದಿ ಶಿವಾನಂದ ವಾಲಿಯನ್ನು ಬಂಧಿಸಿದ್ದಾರೆ. ತಪ್ಪು‌ ಮಾಡಿದವರಿಗೆ ಕಾನೂನು ಪ್ರಕಾರ ಏನು ಆಗಬೇಕೋ ಆಗುತ್ತದೆ. ಪತ್ನಿ, ಅತ್ತೆ, ಮಾವ ಕ್ಷೇಮವಾಗಿ ಅವರ ಸಂಬಂಧಿಕರ ಮನೆಯಲ್ಲಿ ನೆಮ್ಮದಿಯಾಗಿದ್ದಾರೆ. ಹೀಗಾಗಿ, ನಿರಾಳತೆಯಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ನನ್ನ ಕೌಟುಂಬಿಕ ವಿಚಾರದಲ್ಲಿ ಆಕಸ್ಮಿಕವಾಗಿ ಬಂದ ಮೂರನೇ ವ್ಯಕ್ತಿಗಳಿಂದ ನಮಗೆ ತೊಂದರೆ ಆಗಿತ್ತು. ನಮ್ಮವರು ಬಾಯ್ತಪ್ಪಿ ಮಾಡಿದ್ದ ಆರೋಪಗಳಿಗೆ ನಾನು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ಕೊಡಬೇಕಾಯಿತು’ ಎಂದರು.

‘ಯಾರನ್ನಾದರೂ ಮನೆ ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಪೂರ್ವಾಪರ ತಿಳಿದುಕೊಳ್ಳಿ. ಸ್ನೇಹ ಗಳಿಸಿ ವಂಚಿಸುವವರು ಇರುತ್ತಾರೆ. ಹೀಗಾಗಿ, ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.