ADVERTISEMENT

ಪ್ರವಾಹ ಮೆಲುಕು; ‘ಬಾಗಿಲ ಬಳಿ ಸಮುದ್ರ ಕಂಡೆ...!’

ಶ್ರೀಕಾಂತ ಕಲ್ಲಮ್ಮನವರ
Published 14 ಆಗಸ್ಟ್ 2019, 19:45 IST
Last Updated 14 ಆಗಸ್ಟ್ 2019, 19:45 IST
   

ಬೆಳಗಾವಿ: ‘ನನಗೀಗ 76 ವರ್ಷ. ಇಂತಹ ಮಳೆಯನ್ನು ಯಾವತ್ತೂ ನೋಡಲಿಲ್ಲ. ಮಲಪ್ರಭಾ ನದಿ ನೀರು ಯಾವತ್ತೂ ನಮ್ಮ ಮನೆಯ ಹೊಸ್ತಿಲು ಸ್ಪರ್ಶಿಸಿರಲಿಲ್ಲ. ಆದರೆ, ಈಗ ... ನದಿ ನೀರು ಹಳ್ಳಿಯೊಳಗೆ ನುಗ್ಗಿ, ಗ್ರಾಮಸ್ಥರನ್ನೇ ಹೊರದಬ್ಬಿತು’ ಎಂದು ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದ ಅಂಚೆ ಇಲಾಖೆಯ ನಿವೃತ್ತ ನೌಕರ, ಬಸಪ್ಪ ಎಸ್‌. ಮುಳ್ಳೂರ ಸ್ಮರಿಸಿದರು.

ಬಸಪ್ಪ ಎಸ್‌. ಮುಳ್ಳೂರ

ಜಿಲ್ಲೆಯಾದ್ಯಂತ ಕಳೆದ ಹತ್ತು ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಿತು. ಇದರ ಪರಿಣಾಮವಾಗಿ ನದಿ, ಕೊಳ್ಳಗಳು ತುಂಬಿ ಹರಿದವು. ಬಾವಿ, ಕೆರೆಗಳ ಕಟ್ಟೆ ಒಡೆದು ಹೋದವು. ರಸ್ತೆ– ಹೆದ್ದಾರಿಗಳನ್ನು ಕೊಚ್ಚಿಕೊಂಡು ಹೋದವು. ಮನೆಯೊಳಗೆ ನುಗ್ಗಿದ ನೀರು, ಮನೆಯವರನ್ನೆಲ್ಲ ಹೊರಗೆ ಹಾಕಿತು. ತಮ್ಮ ಜೊತೆಯೂ ಆಗಿರುವ ಇಂತಹದ್ದೇ ಅನುಭವವನ್ನು ಹಿರಿಯರಾದ ಬಿ.ಎಸ್‌. ಮುಳ್ಳೂರ ‘ಪ್ರಜಾವಾಣಿ’ ಜೊತೆ ಮೆಲುಕು ಹಾಕಿಕೊಂಡಿದ್ದಾರೆ.

‘ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ ಹುಟ್ಟುವ ಮಲಪ್ರಭಾ ನದಿಯು, ಎಂ.ಕೆ.ಹುಬ್ಬಳ್ಳಿ, ಬೈಲಹೊಂಗಲ (ನಯಾನಗರ) ಮಾರ್ಗವಾಗಿ ಸವದತ್ತಿ ತಲುಪುತ್ತದೆ. ಇಲ್ಲಿಗೆ ಸಮೀಪದ ನವಿಲುತೀರ್ಥದಲ್ಲಿ ಜಲಾಶಯ ನಿರ್ಮಿಸಲಾಗಿದೆ. ಜಲಾಶಯ ಭರ್ತಿಯಾದ ನಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ನೀರು ರಾಮದುರ್ಗ ಮೂಲಕ ಬಾಗಲಕೋಟೆ ಜಿಲ್ಲೆಯತ್ತ ಸಾಗುತ್ತದೆ. ಈ ಜಲಾಶಯ ಭರ್ತಿಯಾಗಿದ್ದರಿಂದ 1 ಲಕ್ಷ ಕ್ಯುಸೆಕ್‌ಗಿಂತಲೂ ಹೆಚ್ಚು ನೀರು ಹೊರಬಿಡಲಾಯಿತು. ಜಲಾಶಯ ನಿರ್ಮಿಸಿದ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹೊರಬಿಡಲಾಯಿತು’.

ADVERTISEMENT

‘ಇಷ್ಟೊಂದು ಪ್ರಮಾಣದಲ್ಲಿ ನೀರು ಹೊರಬಿಡಬಹುದೆಂದು ಯಾರೂ ಊಹಿಸಿರಲಿಲ್ಲ. ಅಪಾರ ಪ್ರಮಾಣದ ನೀರು ಹಲಗತ್ತಿ, ಹಳೇ ತೋರಗಲ್ಲ, ಕಿಲ್ಲಾ ತೋರಗಲ್ಲ, ದೊಡ್ಡಮಂಗಡಿ, ಚಿಂಚಗಂಟಿ, ಗಟಕನೂರು, ಸುರೇಬಾನ ಸೇರಿದಂತೆ ರಾಮದುರ್ಗ ತಾಲ್ಲೂಕಿನ 29 ಹಳ್ಳಿಗಳು ಜಲಾವೃತಗೊಂಡವು. ಇದೇ ಮೊದಲ ಬಾರಿಗೆ ನಾವೆಲ್ಲ ಮನೆ ಬಿಟ್ಟು, ಸಂಬಂಧಿಕರ ಮನೆಗೆ ಆಶ್ರಯ ಪಡೆದುಕೊಳ್ಳುವಂತಾಯಿತು’.

‘1965ರಲ್ಲಿಯೂ ಭಾರಿ ಮಳೆ ಬಂದಿತ್ತು. ಆಗ ನವಿಲುತೀರ್ಥ ಜಲಾಶಯ ಇನ್ನೂ ನಿರ್ಮಾಣವಾಗಿರಲಿಲ್ಲ. ಮಲಪ್ರಭಾ ನದಿಯ ನೀರು ಹೀಗೆ ಹಳ್ಳಿಗಳಲ್ಲಿ ನುಗ್ಗಿಕೊಂಡು ಬಂದಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಬಂದಿರಲಿಲ್ಲ. ಒಂದೆರಡು ದಿನಗಳಲ್ಲಿ ನೀರಿನ ಪ್ರವಾಹ ಇಳಿದುಹೋಗಿತ್ತು. ಇದೇ ಸಲ ಒಂದು ವಾರಗಳ ಕಾಲ ನೀರು ನಿಂತುಕೊಂಡಿತ್ತು. ಮನೆಯೊಳಗೆ ನುಗ್ಗಿದ ನೀರು, ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ವಸ್ತುಗಳು, ನಗದು ಹಣ ನಾಶವಾಗಿದೆ. ಕೆಲವು ಕಡೆ ಮನೆಯ ಗೋಡೆಗಳು ಬಿದ್ದುಹೋಗಿವೆ. ಕುರಿ, ಕೋಳಿ, ದನ ಕರುಗಳು ನೀರಿನಲ್ಲಿಯೇ ತೇಲಿಹೋಗಿವೆ. ಅಪಾರ ಪ್ರಮಾಣದಲ್ಲಿ ನಷ್ಟ ಉಂಟು ಮಾಡಿದೆ’.

‘ನಿರಾಶ್ರಿತರಾದವರು ತಮ್ಮ ಸಂಬಂಧಿಗಳ ಮನೆಗಳಿಗೆ ಹಾಗೂ ಸರ್ಕಾರ ತೆರೆದ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಬಹಳಷ್ಟು ಜನ ನೇಕಾರರು ತಮ್ಮ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಬದುಕಿನ ಮುಖ್ಯ ಆಸರೆಯಾಗಿದ್ದ ಕೈಮಗ್ಗಗಳು ಸಂಪೂರ್ಣ ಹಾಳಾಗಿವೆ. ಇವರ ಬದುಕು ಮೊದಲಿನ ಸ್ಥಿತಿಗೆ ಬರಬೇಕಾದರೆ, ಇನ್ನು ಬಹಳ ಸಮಯ ಬೇಕಾಗಬಹುದು. ಸರ್ಕಾರ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.