ಬೆಳಗಾವಿ: ‘ಮಹಿಳಾ ಉದ್ಯೋಗಿಗಳ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆ ಬಗೆಹರಿಸಲು ಈ ಸಂಘ ರಚಿಸಲಾಗಿದೆ. ಮಹಿಳಾ ಉದ್ಯೋಗಿಗಳೊಂದಿಗೆ ಯಾವುದೇ ಅಹಿತಕರ ಘಟನೆ ನಡೆದಾಗ, ಅವರು ನಮ್ಮ ಸಂಘದ ಸದಸ್ಯರಾಗಿದ್ದಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ನಾವು ಕ್ರಮ ಕೈಗೊಳ್ಳುತ್ತೇವೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷೆ ವೀಣಾ ಹೊಸಮನಿ ಹೇಳಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸಮನಿ, ‘2023ರಲ್ಲಿ ಸ್ಥಾಪನೆಯಾದ ಸಂಘವು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ಮಹಿಳಾ ಉದ್ಯೋಗಿಗಳಿಗೆ ಪ್ರಾತಿನಿಧ್ಯವಿದೆ. ಆದರೆ, ಮಹಿಳೆಯರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಪುರುಷ ಸಹವರ್ತಿಗಳೊಂದಿಗೆ ಚರ್ಚಿಸಲು ಸಾಧ್ಯವಿಲ್ಲ. ಮುಟ್ಟಿನ ರಜೆ ಸೇರಿ ಕೆಲವು ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸುವಾಗ ಮಹಿಳೆಯರು ಅನಾನುಕೂಲತೆ ಎದುರಿಸುತ್ತಾರೆ. ಅಂಥ ಸಮಸ್ಯೆಗಳನ್ನು ನಮ್ಮ ಸಂಘ ಪರಿಶೀಲಿಸುತ್ತದೆ’ ಎಂದರು.
‘ನಾವು ಮಹಿಳಾ ಉದ್ಯೋಗಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ತಪಾಸಣೆ ಶಿಬಿರ, ಯೋಗ ಶಿಬಿರ, ಸಂಗೀತ ಕಾರ್ಯಕ್ರಮ, ಕ್ರೀಡಾಕೂಟ ಮೊದಲಾದ ಚಟುವಟಿಕೆ ಆಯೋಜಿಸುತ್ತೇವೆ. ಮಹಿಳೆಯರಿಗೆ ಅನ್ಯಾಯವಾದಾಗ ಗಟ್ಟಿಯಾಗಿ ಧ್ವನಿ ಎತ್ತುತ್ತೇವೆ’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ದಳವಾಯಿ, ‘ಸಂಘದ ಬೆಳಗಾವಿ ಜಿಲ್ಲಾ ಘಟಕಕ್ಕೆ 2025ರ ನವೆಂಬರ್ ಅಂತ್ಯದಲ್ಲಿ ಪದಾಧಿಕಾರಿಗಳ ನೇಮಕವಾಗಿದೆ. 2026ರ ಫೆಬ್ರುವರಿ ಅಂತ್ಯಕ್ಕೆ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.