ADVERTISEMENT

ಕಲಾವಿದರಿಗೆ ಬಹುಪ್ರಕಾರಗಳ ಜ್ಞಾನ ಅಗತ್ಯ

ಚಿತ್ರ ಕಲಾವಿದ ಡಾ.ಡಿ.ಎಸ್. ಚೌಗಲೆ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 14:36 IST
Last Updated 15 ಏಪ್ರಿಲ್ 2021, 14:36 IST
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ವರ್ಣ ಕಲಾ ಸಾಂಸ್ಕೃತಿಕ ಸಂಘದಿಂದ ಗುರುವಾರ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸತ್ಕರಿಸಲಾಯಿತು
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ವರ್ಣ ಕಲಾ ಸಾಂಸ್ಕೃತಿಕ ಸಂಘದಿಂದ ಗುರುವಾರ ಆಯೋಜಿಸಿದ್ದ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸತ್ಕರಿಸಲಾಯಿತು   

ಬೆಳಗಾವಿ: ‘ಮನುಷ್ಯನ ಮೂಲ ಪ್ರವೃತ್ತಿ ಮತ್ತು ನೈತಿಕತೆ ನಡುವೆ ಒಂದು ತೆಳುವಾದ ಗೆರೆ ಇದೆ. ನೈತಿಕತೆ ಮೇಲುಗೈ ಸಾಧಿಸಲು ಮನುಷ್ಯನ ಮೇಲೆ ಬೀರುವ ಕಲೆ ಸಂಸ್ಕೃತಿಗಳ ಪ್ರಭಾವವೆ ಕಾರಣ. ಇವೆರಡರ ನಡುವಿನ ಸಂಘರ್ಷವನ್ನು ವ್ಯಕ್ತಿ ಎದುರಿಸುತ್ತಲೇ ಬಂದಿದ್ದಾನೆ. ಅದಕ್ಕೆ ಧೈರ್ಯ ತಂದು ಕೊಟ್ಟಿದ್ದು ಚಿತ್ರ, ಕಾವ್ಯ ಮತ್ತು ನಾಟಕ ಕಲೆಗಳು’ ಎಂದು ನಾಟಕಕಾರ ಹಾಗೂ ಚಿತ್ರ ಕಲಾವಿದ ಡಾ.ಡಿ.ಎಸ್. ಚೌಗಲೆ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ವರ್ಣ ಕಲಾ ಸಾಂಸ್ಕೃತಿಕ ಸಂಘದಿಂದ ಗುರುವಾರ ಏರ್ಪಡಿಸಿದ್ದ ಪ್ರಸಿದ್ಧ ಕಲಾವಿದ ಲಿಯೊನಾರ್ಡೋ ಡಾವಿಂಚಿ ಸ್ಮರಣೆಯ ವಿಶ್ವ ಕಲಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಸರಾಂತ ಕವಿ ರಿಲ್ಕ್‌ನ ಕಾವ್ಯ ಗಟ್ಟಿಗೊಳ್ಳಲು ಅವನು ಶ್ರೇಷ್ಠ ದರ್ಜೆಯ ಶಿಲ್ಪಿ ರಾಡಿನ್ ಮತ್ತು ಕಲಾವಿದ ಸೆಜಾನ್ ಅವರ ಜೊತೆಗಿನ ಒಡನಾಟವೇ ಕಾರಣ. ಯಾವುದೇ ಸೃಜನಶೀಲ ಗುಣಕ್ಕೆ ಬಹುಪ್ರಕಾರಗಳ ತಿಳಿವಳಿಕೆ ಅಗತ್ಯ. ಲಲಿತಕಲೆ ಮತ್ತು ಸಾಹಿತ್ಯದ ಅರಿವು ಚಿತ್ರಕಲಾವಿದನಿಗಿರಬೇಕು. ಬಹುಶಿಸ್ತೀಯ ಜ್ಞಾನ ಕಲಾವಿದನನ್ನು ಪರಿಪಕ್ವಗೊಳಿಸುತ್ತದೆ. ಹೀಗಾಗಿಯೇ ಅವನಿಂದ ಶ್ರೇಷ್ಠ ಕೃತಿಗಳು ರಚನೆಯಾಗುತ್ತವೆ. ಇದು ಎಲ್ಲ ಸೃಜನಶೀಲರಿಗೆ ಅನ್ವಯವಾಗುವಂಥದ್ದು’ ಎಂದರು.

ADVERTISEMENT

‘ಲಿಯೋನಾರ್ಡೋ ಡಾವಿಂಚಿ ಇಂದು ಚರ್ಚೆಗೆ ಒಳಗಾಗಲು ಅವನ ಬಹುಪ್ರಕಾರಗಳ ಜ್ಞಾನವೇ ಕಾರಣ. ನಮ್ಮ ನಡುವಿನ ಕಲಾವಿದರು ಈ ಧೋರಣೆ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಲಾವಿದ ಪ್ರಹ್ಲಾದ ಸಾಬಣ್ಣವರ ಅಧ್ಯಕ್ಷತೆ ವಹಿಸಿದ್ದರು. ಗೋಕಾಕನ ಕರ್ನಾಟಕ ಲಲಿತಕಲಾ ಕಾಲೇಜಿನ ಅಧ್ಯಾಪಕಿ ಅರ್ಚನಾ ಸುತಾರ ‘ಚಿತ್ರಕಲೆ ಮತ್ತು ಸೌಂದರ್ಯ ಪ್ರಜ್ಞೆವಿಷಯ’ ಕುರಿತು ಉಪನ್ಯಾಸ ನೀಡಿದರು. ಕಲಾವಿದರಾದ ಬಾಬುರಾವ ನಡೋಣಿ, ಬಾಳು ಗಸ್ತಿ, ರಾಜು ದೇವಋಷಿ ಮಾತನಾಡಿದರು.

ಕಲಾವಿದೆ ಶಿಲ್ಪಾ ಖಡಕಭಾವಿ ಮತ್ತು ವರ್ಣಕಲಾ ಸಾಂಸ್ಕೃತಿಕ ಸಂಘದ ನಾಗೇಶ ಚಿಮರೋಲ,ವಿಶ್ವನಾಥ ಗುಗ್ಗರಿ, ಮಹೇಶ ಹೊನುಲೆ, ಸುಶೀಲ ತರಬಾರ ಉಪಸ್ಥಿತರಿದ್ದರು.

ಕಲಾವಿದೆ ಆಶಾತಾಯಿ ನಡೋಣಿ, ಅಜಿತ ಹುಲಮನಿ, ಭೂಮಿಕಾ ಬರಡವಾಡ ಮತ್ತು ಕಲಾವಿದ ಪ್ರಹ್ಲಾದ ಸಾಬಣ್ಣವರ ಅವರನ್ನು ಸತ್ಕರಿಸಲಾಯಿತು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡಿದರು. ಮೋನಿಕಾ ಹಲವಾಯಿ ನಿರೂಪಿಸಿದರು. ಅಪ್ಪು ಕಾಂಬಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.