ADVERTISEMENT

ನಿಸರ್ಗ ರಕ್ಷಣೆಯಿಂದ ಆರೋಗ್ಯ: ಡಾ.ಪ್ರವೀಣ ಘೋರ್ಪಡೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 12:30 IST
Last Updated 7 ಏಪ್ರಿಲ್ 2022, 12:30 IST

ಬೆಳಗಾವಿ: ‘ನಿಸರ್ಗವನ್ನು ರಕ್ಷಿಸಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನು ಕಾ‍ಪಾಡಿಕೊಳ್ಳಬಹುದು ಮತ್ತು ಇದರಿಂದ ಮನುಕುಲದ ಕಲ್ಯಾಣವೂ ಸಾಧ್ಯ’ ಎಂದು ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್‌ ವಿಭಾಗದ ಉಪನ್ಯಾಸಕ ಡಾ.ಪ್ರವೀಣ ಘೋರ್ಪಡೆ ಹೇಳಿದರು.

ಇಲ್ಲಿನ ಯಳ್ಳೂರ ರಸ್ತೆಯ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಕಾರ್ಯುಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಸರ ಮಾಲಿನ್ಯ ತಡೆಯುವ ಮೂಲಕ ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು’ ಎಂದರು.

ADVERTISEMENT

‘ಪ್ರಕೃತಿಯು ನಮಗೆ ನೀರು, ಆಮ್ಲಜನಕ, ಆಹಾರ ಮೊದಲಾದವುಗಳನ್ನು ನೀಡಿದೆ. ಆದರೆ, ಮಾನವನ ಅತಿಯಾಸೆಯು ಅಮೂಲ್ಯ ವರಗಳನ್ನು ಹಾಳು ಮಾಡುತ್ತಿದೆ. ದೀರ್ಘಾಯುಷ್ಯದ ಎಷ್ಟೋ ಅಂಶಗಳು ಪ್ರಕೃತಿಯಲ್ಲೇ ಇವೆ. ನಮ್ಮ ಆಡಂಬರದ ಜೀವನಕ್ಕೆ ಆ ಎಲ್ಲ ಅಂಶಗಳೂ ಬಲಿಯಾಗುತ್ತಿವೆ. ಸರಳ ಜೀವನ ಹಾಗೂ ನಿಸರ್ಗಕ್ಕೆ ಹೊಂದಿಕೊಂಡರೆ ನಾವೂ ಒಳ್ಳೆಯ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ಕಂಡುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.

ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ, ‘ಪ್ರಪಂಚದೆಲ್ಲೆಡೆ ವಿವಿಧ ಕಾರಣಗಳಿಂದ ಜಾಗತಿಕ ತಾಪಮಾನವು ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಪರಿಸರಸ್ನೇಹಿ ಕ್ರಮಗಳನ್ನು ಅನುಸರಿಸಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕೆಎಲ್‌ಇ ಹೊಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎ. ಉಡಚನಕರ, ‘ಸರಳ ಜೀವನ ಪದ್ಧತಿಯಿಂದ ನಮಗೂ ಒಳ್ಳೆಯದು ಮತ್ತು ಪರಿಸರಕ್ಕೂ ಒಳಿತಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಯುಎಸ್ಎಂ–ಕೆಎಲ್‌ಇ ಯೋಜನೆಯ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ, ‘ಎಲ್ಲವನ್ನೂ ನೀಡಿರುವ ಪ್ರಕೃತಿಗೆ ಎಲ್ಲರೂ ವಿಧೇಯರಾಗಿರಬೇಕು. ನಾವು ಕಲಿತ ಜ್ಞಾನ, ವಿಜ್ಞಾನಗಳು ನಿಸರ್ಗಕ್ಕೆ ಹಾನಿಕಾರಕ ಆಗಬಾರದು. ನಾವು ಉಪಯೋಗಿಸುವ ವಸ್ತುಗಳು ಎಲ್ಲರ ಆರೋಗ್ಯ ಕಾಪಾಡುವಂತಿರಬೇಕು. ಸಸಿಗಳನ್ನು ನೆಟ್ಟು ಬೆಳೆಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅರುಣ ನಾಗಣ್ಣವರ ನಿರೂಪಿಸಿದರು. ಸಂತೋಷ ಇತಾಪೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.