ADVERTISEMENT

ಜಿಲ್ಲೆಯಲ್ಲಿ 4,859 ಕ್ಷಯ ರೋಗಿಗಳು ಪತ್ತೆ

ಬೆಳಗಾವಿಯಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 12:52 IST
Last Updated 24 ಮಾರ್ಚ್ 2019, 12:52 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ ಮಾತನಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಶೈಲಜಾ ತಮ್ಮಣ್ಣವರ ಮಾತನಾಡಿದರು   

ಬೆಳಗಾವಿ: ‘ಜಿಲ್ಲೆಯಲ್ಲಿ ಆರ್‌ಎನ್‌ಟಿಸಿಪಿಯಲ್ಲಿ (ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ) 2018ನೇ ಸಾಲಿನಲ್ಲಿ ಸರ್ಕಾರಿ ವಲಯದಲ್ಲಿ 4,307 ಮತ್ತು ಖಾಸಗಿ ಕ್ಷೇತ್ರಗಳಿಂದ 552 ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ, ಶೇ 15ರಷ್ಟು ಮಂದಿಗೆ ಸಂಪೂರ್ಣ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ’ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಡಾ.ಶೈಲಜಾ ತಮ್ಮಣ್ಣವರ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯ ರೋಗ ನಿಯಂತ್ರಣ ವಿಭಾಗ, ಬಿಮ್ಸ್‌, ಭಾರತಿಯ ವೈದ್ಯಕೀಯ ಸಂಸ್ಥೆ ಬೆಳಗಾವಿ ಶಾಖೆ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷಯ ಸಾಂಕ್ರಾಮಿಕ ರೋಗ. 1882ರಲ್ಲಿ ಜರ್ಮನಿಯ ರಾಬರ್ಟ್ ಕಾಕ್ ಎಂಬ ವಿಜ್ಞಾನಿಯು ಈ ರೋಗಾಣು ಕಂಡುಹಿಡಿದರು. ಹೀಗಾಗಿ, ಜಗತ್ತಿನ ಎಲ್ಲ ಕಡೆಯೂ ಮಾರ್ಚ್‌ 24ರಂದು ವಿಶ್ವ ಕ್ಷಯ ರೋಗ ದಿನ ಆಚರಿಸಲಾತ್ತದೆ. ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ಪಿಎಂಡಿಟಿ ಕಾರ್ಯಕ್ರಮವು 2012ರ ನವೆಂಬರ್‌ನಿಂದ ಅನುಷ್ಠಾನಕ್ಕೆ ಬಂದಿದೆ. ಕ್ಷಯದ ತುರ್ತು ಪತ್ತೆಗಾಗಿ ಅತ್ಯಾಧುನಿಕ ತಪಾಸಣಾ ಯಂತ್ರಗಳನ್ನು ಬಿಮ್ಸ್‌, ಚಿಕ್ಕೋಡಿ, ಗೋಕಾಕ, ಅಥಣಿ ಹಾಗೂ ಸವದತ್ತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಚಿಕ್ಕೋಡಿಯ ಹೆಚ್ಚುವರಿ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಮಾತನಾಡಿ, ‘ಇದು ಸಮಯ ಕ್ಷಯರೋಗ ಮುಕ್ತ ವಿಶ್ವ ನಿರ್ಮಾಣಕ್ಕಾಗಿ ಎಂಬ ಘೋಷಣೆ ಈ ಸಾಲಿನದಾಗಿದೆ. ವೈದ್ಯಕೀಯ ವಿಜ್ಞಾನದ ಆವಿಷ್ಕಾರಕ್ಕಿಂತ ಮೊದಲು ಕ್ಷಯ ರೋಗದ ಪ್ರಖರತೆ ಹಾಗೂ ಅದರ ಬಗ್ಗೆ ಇದ್ದ ಸಾಮಾಜಿಕ ಕೀಳರಿಮೆಗಳು ತೊಲಗಿಸಿ, ರೋಗ ಗುಣಪಡಿಸುವ ಸಮಯ ಬಂದಿದೆ. ಪ್ರಾರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ತ್ವರಿತ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ’ ಎಂದು ತಿಳಿಸಿದರು.

‘ಈ ಸಮಯದಲ್ಲಿ ನಾವು ಕ್ಷಯ ಮುಕ್ತ ವಿಶ್ವ ನಿರ್ಮಾಣಕ್ಕಾಗಿ ಪ್ರಯತ್ನಿಸುತ್ತೇವೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸುತ್ತೇವೆ’ ಎಂದು ನೆರೆದಿದ್ದವರು ಪ್ರತಿಜ್ಞೆ ಸ್ವೀಕರಿಸಿದರು.

2018–19ನೇ ಸಾಲಿನಲ್ಲಿ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಉತ್ತಮ ಪ್ರಗತಿ ತೋರಿದ ಆಧಿಕಾರಿಗಳು, ಸಿಬ್ಬಂದಿ, ಖಾಸಗಿ ವೈದ್ಯರು, ಆಶಾ ಕಾರ್ಯಕರ್ತೆ ಮತ್ತು ಕಟಕೋಳದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಕೋಳ ಹಾಗೂ ಚಿಕ್ಕೋಡಿಯ ಸಿಬಿನ್ಯಾಟ್ ಕೇಂದ್ರದವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕಿತ್ತೂರು ಕ್ಷಯ ರೋಗ ಘಟಕ ಎಂಒಟಿಸಿಯಡಾ.ಶಿವಾನಂದ ಮಾಸ್ತಿಹೊಳಿ, ಬಿಮ್ಸ್‌ ಸ್ಥಾನಿಕ ವೈದ್ಯಾಧಿಕಾರಿ ಡಾ.ಎನ್. ಸರಸ್ವತಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಆರ್. ಡುಮ್ಮಗೋಳ, ಶ್ವಾಸಕೋಶ ತಜ್ಞರಾದ ಡಾ.ಗಜಾನನ ಗಾವಡೆ, ಡಾ.ಸಂದೀಪ ದಂಡಗಿ, ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕಿ ಡಾ.ಶೋಭಾ ಕರಿಕಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಚಾಂದನಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಾವಿತ್ರಿ ಬೆಂಡಿಗೇರಿ ಭಾಗವಹಿಸಿದ್ದರು.

ತೇಜಸ್ವಿನಿ ಎಸ್.ಕೆ. ಹಾಗೂ ಶ್ರೀನಿಧಿ ಪಾಂಡೆ ಪ್ರಾರ್ಥಿಸಿದರು. ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಕ (ಪ್ರಭಾರ) ಬಿ.ಪಿ. ಯಲಿಗಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.