ADVERTISEMENT

ಸವದತ್ತಿ: ರೇಣುಕಾ ಸನ್ನಿಧಿಯಲ್ಲಿ ಭಕ್ತಿ ಹೊಳೆ– ಮುಗಿಲು ಮುಟ್ಟಿದ ಜೈಕಾರ

ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಹರಿದುಬಂದ ಭಕ್ತರ ದಂಡು, ಮುಗಿಲು ಮುಟ್ಟಿದ ಜೈಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 19:28 IST
Last Updated 5 ಫೆಬ್ರುವರಿ 2023, 19:28 IST
ಸವದತ್ತಿ ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ಜಾತ್ರೆಯ ಅಂಗವಾಗಿ ಅ‍ಪಾರ ಸಂಖ್ಯೆಯ ಭಕ್ತರು ಸೇರಿದರು / ಪ್ರಜಾವಾಣಿ ಚಿತ್ರ
ಸವದತ್ತಿ ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಾರತ ಹುಣ್ಣಿಮೆ ಜಾತ್ರೆಯ ಅಂಗವಾಗಿ ಅ‍ಪಾರ ಸಂಖ್ಯೆಯ ಭಕ್ತರು ಸೇರಿದರು / ಪ್ರಜಾವಾಣಿ ಚಿತ್ರ   

ಸವದತ್ತಿ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಭಾನುವಾರ ಭಕ್ತಿಯ ಹೊಳೆ ಹರಿಯಿತು. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಗದಂಬಾ ಸನ್ನಿಧಿಯಲ್ಲಿ ಭಾರತ ಹುಣ್ಣಿಮೆ ಸಂಕ್ಷಿಪ್ತವಾಗಿ ಆಚರಿಸಲಾಗಿತ್ತು. ಈ ಬಾರಿ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಅಪಾರ ಜನ ಸೇರಿದರು.

ರೇಣುಕಾದೇವಿ ಸನ್ನಿಧಿಗೆ ಬಂದು ಪರಡಿ ತುಂಬುವುದು ಭಾರತ ಹುಣ್ಣಿಮೆಯ ಸಂಪ್ರದಾಯಗಳಲ್ಲಿ ಒಂದು. ಅದರಂತೆ, ಭಾನುವಾರ ಕೂಡ ಅಪಾರ ಭಕ್ತರು ಬೆಟ್ಟದಲ್ಲೇ ಪುಣ್ಯಸ್ನಾನ ಮಾಡಿ, ನೈವೇದ್ಯ ಸಿದ್ಧಪಡಿಸಿ ಪರಡಿ ತುಂಬಿದರು.

ಕರಿಗಡಬು, ಹೋಳಿಗೆ, ಕರ್ಚಿಕಾಯಿ, ಅನ್ನ–ಸಾರು, ಪಲ್ಯ, ವಡೆ, ಭಜ್ಜಿ, ಸಂಡಿಗೆ, ಹಪ್ಪಳ, ನೆಲಗಡಲೆ– ಬೆಲ್ಲ... ಹೀಗೆ ವಿವಿಧ ನಮೂನೆಯ ಪದಾರ್ಥಗಳನ್ನು ದೇವಿಗೆ ಅರ್ಪಿಸುವುದು ವಾಡಿಕೆ. ಬಿದಿರ ಬುಟ್ಟಿಯಿಂದ ಮಾಡಿದ ಪರಡಿಯಲ್ಲಿ ದೇವಿಯ ಪುಟ್ಟ ಮೂರ್ತಿ ಇಟ್ಟು ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ ನಂತರ ಪರಡಿಯಲ್ಲಿ ಈ ಎಲ್ಲ ತಿನಿಸುಗಳನ್ನೂ ತುಂಬಿ ನೈವೇದ್ಯ ಮಾಡಿದರು.

ADVERTISEMENT

ಪ್ರತಿ ಊರಿನಿಂದಲೂ ಹಲವರು ಈ ರೀತಿಯ ಪರಡಿಯಲ್ಲಿ ದೇವಿ ಮೂರ್ತಿಗಳನ್ನು ಹೊತ್ತು ತರುವುದು ಪದ್ಧತಿ. ಈ ಮೂರ್ತಿಗಳಿಗೆ ಇಲ್ಲಿ ಪೂಜೆ, ನೈವೇದ್ಯ ಮಾಡಿ ನಂತರ ರೇಣುಕಾದೇವಿಯ ಸನ್ನಿಧಿಯಲ್ಲಿ ಉಡಿ ತುಂಬಿದರು. ಯಕ್ಕಯ್ಯ, ಜೋಗಯ್ಯ ಎಂದು ಜೋಗಾಡುತ್ತ ಗುಡ್ಡದಲ್ಲಿ ಯಾತ್ರೆ ಮಾಡಿದರು.

ಹಲವು ಮಹಿಳೆಯರು, ಮಕ್ಕಳು, ಹಿರಿಯರು ಕೂಡ ದೀರ್ಘದಂಡ ನಮಸ್ಕಾರ ಹಾಕಿದರು. ತಮ್ಮ ಇಷ್ಟಾರ್ಥ ಪೂರೈಸಿದರೆ, ಕಷ್ಟ– ಕಾರ್ಪಣ್ಯಗಳನ್ನು ಪರಿಹಾರ ಮಾಡಿದ ಬಳಿಕ ಈ ರೀತಿ ದೀರ್ಘದಂಡ ನಮಸ್ಕಾರ ಹಾಕುವುದು ರೂಢಿ. ಈ ರೀತಿ ದೀರ್ಘದಂಡ ನಮಸ್ಕಾರ ಹಾಕುವವರ ಕೈಯಲ್ಲಿ ಊರಲು ಕೊಡುವ ಊರುಗೋಲುಗಳನ್ನೇ ಟ್ರ್ಯಾಕ್ಟರ್‌ನಲ್ಲಿ ಲೋಡ್‌ಗಟ್ಟಲೇ ತರಲಾಗಿತ್ತು.

ಕಳೆದುಹೋದವರು: ಜನಸಂದಣಿಯಲ್ಲಿ ತಪ್ಪಿಸಿಕೊಂಡ ಮಕ್ಕಳು, ಹಿರಿಯರಿಗಾಗಿ ಪದೇಪದೇ ಕರೆ ಮಾಡಲಾಗುತ್ತಿತ್ತು. ಈ ರೀತಿಯ ಬಳಗದಿಂದ ತಪ್ಪಿಸಿಕೊಂಡವರ ನೆರವಿಗಾಗಿಯೇ ಪೊಲೀಸ್‌ ಚೌಕಿ ತೆರೆಯಲಾಗಿತ್ತು. ಅಲ್ಲಿನ ಸಹಾಯ ಕೇಂದ್ರದಲ್ಲಿ ಕುಳಿತ ಸಿಬ್ಬಂದಿ ಮೈಕುಗಳಲ್ಲಿ ಪದೇಪದೇ ಕೂಗಿ ತಪ್ಪಿಸಿಕೊಂಡವರು ಎಲ್ಲಿಗೆ ಬರಬೇಕು ಎಂದು ಹೇಳುತ್ತಲೇ ಇದ್ದರು. ಬೆಳಿಗ್ಗೆ 8ಕ್ಕೆ ಆರಂಭವಾದ ಈ ಸಹಾಯ ಕೇಂದ್ರದ ಲೋಡ್‌ಸ್ಪೀಕರ್‌ ರಾತ್ರಿ 8ರವರೆಗೆ ಕೂಗುತ್ತಲೇ ಇತ್ತು.

ಜಾತ್ರೆಯ ಪ್ರತಿ ಚಲನ-ವಲನಗಳ ಮೇಲೆ ಯಲ್ಲಮ್ಮ ದೇವಸ್ಥಾನ ನಿಗಾ ಇರಿಸಲು 40 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು.

ದೂರದ ಊರುಗಳಿಗೆ ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್‍ ಸೌಕರ್ಯ ಕಲ್ಪಿಸಿತ್ತು. ಜತೆಗೆ, ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯಿಂದಲೂ ಹೆಚ್ಚಿನ ಬಸ್‍ಗಳೂ ಬಂದಿದ್ದವು.

*

ಸಂಚಾರ ದಟ್ಟಣೆ; ಪರದಾಟ

ಉಗರಗೋಳದಿಂದ ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಭಕ್ತರು ಇಡೀ ದಿನ ಪರದಾಡಿದರು.

ಉಗರಗೋಳ ಮಾರ್ಗದಲ್ಲಿ 4 ಕಿ.ಮೀ.ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಬಳ್ಳಾರಿ, ರಾಯಚೂರು ಮುಂತಾದ ಜಿಲ್ಲೆಗಳ ಭಕ್ತರ ವಾಹನಗಳು ಇದೇ ಮಾರ್ಗದಲ್ಲಿ ಬರಬೇಕು. ಭಾನುವಾರ ಏಕಕಾಲಕ್ಕೆ ಸಾವಿರಾರು ವಾಹನಗಳು ಬಂದಿದ್ದರಿಂದ ವಾಹನಗಳು ಕಿಕ್ಕಿರಿದು ತುಂಬಿದವು.

ಅನಿವಾರ್ಯವಾಗಿ ಜನರು ಗುಡ್ಡದ ಮೇಲೆ ಏರಿ ಅಡ್ಡ ದಾರಿಗಳಲ್ಲಿ ಸಾಗಿ ದೇವಿ ಸನ್ನಿಧಿ ತಲುಪಿದರು. ಹಲವರು ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು, ಸಾಮಾನು ಸರಂಜಾಮುಗಳನ್ನು ತಲೆ ಮೇಲೆ ಹೊತ್ತು ಸಾಗಿದ್ದು ಸಾಮಾನ್ಯವಾಯಿತು. ಇದೂ ಸಾಧ್ಯವಾಗದ ಜನ ಬೆಟ್ಟಕ್ಕೂ ಹೋಗದೇ, ಉಗರಗೋಳ ಗ್ರಾಮದ ಬಯಲಲ್ಲೇ ಒಲೆ ಹೂಡಿ, ಅಡುಗೆ ಮಾಡಿ ಜಾತ್ರೆ ಆಚರಿಸಿದರು. ಇವರು ಸೋಮವಾರ ಬೆಟ್ಟಕ್ಕೆ ಹೋಗಿ ದೇವಿ ದರ್ಶನ ಪಡೆಯಲಿದ್ದಾರೆ.

*

ಮದ್ಯ ಮಾರಾಟ: ಮೂವರ ಬಂಧನ

ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆಯ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಭಾನುವಾರ ಮೂರು ಪ್ರಕರಣ ದಾಖಲಿಸಿ, ಮೂವರನ್ನು ಬಂಧಿಸಿದರು. ಶನಿವಾರ ಕೂಡ ಐವರನ್ನು ಬಂಧಿಸಲಾಗಿತ್ತು.

ರೇಣುಕಾ ಪರಶುರಾಮ್ ಲಮಾಣಿ, ರಾಜು ಭೀಮಶಿ ಲಮಾಣಿ, ಉಮೇಶ ಸಿದ್ದಪ್ಪ ಪೂಜೇರಿ ಬಂಧಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.