ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಯಲ್ಲಮ್ಮ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಗುರುವಾರ ಮುಕ್ತಾಯಗೊಂಡಿದ್ದು, ₹1.04 ಕೋಟಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.
ಇದರಲ್ಲಿ ₹5.22 ಲಕ್ಷ ಮೌಲ್ಯದ 53 ಗ್ರಾಂ ಚಿನ್ನಾಭರಣ, ₹1.27 ಲಕ್ಷ ಮೌಲ್ಯದ 1,276 ಗ್ರಾಂ ಬೆಳ್ಳಿ ಸಾಮಗ್ರಿ, ₹98.23 ಲಕ್ಷ ನಗದು ಸೇರಿದೆ ಎಂದು ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡುಗುಂಟಿ ತಿಳಿಸಿದರು.
ಸಪ್ತಗುಡ್ಡ, ಸಪ್ತಕೊಳ್ಳಗಳ ನಡುವೆ ನೆಲೆ ನಿಂತ ಯಲ್ಲಮ್ಮನ ಸನ್ನಿಧಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಇಡೇರಿದ ಹಿನ್ನೆಲೆಯಲ್ಲಿ ದೇವಸ್ಥಾನದ ಹುಂಡಿಯಲ್ಲಿ, ನಗದು ಮಾತ್ರವಲ್ಲದೆ ಚಿನ್ನಾಭರಣ, ಬೆಳ್ಳಿ ಆಭರಣ ಹಾಕಿ ಭಕ್ತಿ ಸಮರ್ಪಿಸುತ್ತಾರೆ.
ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಕಾರ್ಯಧರ್ಶಿ, ದೇವಸ್ಥಾನ ಅಧಿಕಾರಿಗಳು, ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ, ಸವದತ್ತಿಯ ತಹಶೀಲ್ದಾರ, ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಹುಂಡಿಗಳನ್ನು ಒಡೆಯಲಾಯಿತು.
ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಬಾಳೇಶ ಅಬ್ಬಾಯಿ, ಎಂ.ಪಿ. ದ್ಯಾಮನಗೌಡ್ರ, ಅಲ್ಲಮಪ್ರಭು ಪ್ರಭುನವರ, ಆರ್.ಎಚ್. ಸವದತ್ತಿ, ಎನ್.ಎಂ. ಮುದಿಗೌಡರ, ಕೆನರಾ ಬ್ಯಾಂಕ್ ಮ್ಯಾನೇಜರ್ ಚಾನಾಕ್ಷೀ, ಮಾಂತೇಶ ಕೋಡಳ್ಳಿ, ಪ್ರಭು ಹಂಜಗಿ, ಶಿವಾನಂದ ನೇಸರಗಿ, ಅನಿಲ ತೇರದಾಳ, ಜಗದೀಶ ರೇವಣ್ಣವರ, ಎಎಸ್‍ಐ ಬಿ.ಆರ್. ಸಣ್ಣಮಾಳಗೆ, ಆನಂದ ಗೊರವನಕೊಳ್ಳ, ಡಿ.ಡಿ. ನಾಗನಗೌಡರ್ ಹಾಗೂ ದೇವಸ್ಥಾನದ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.