ADVERTISEMENT

ತಂದೆಯ ಇಚ್ಚೆಯಂತೆ ನಡೆಯುವೆ: ಯತೀಂದ್ರ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 2:47 IST
Last Updated 26 ಡಿಸೆಂಬರ್ 2025, 2:47 IST
ಕಾಗವಾಡ ತಾಲ್ಲೂಕಿನ ಕವಲಗುಡ್ಡ ಗ್ರಾಮದ ಕರಿಯೋಗ ಸಿದ್ದ ಶಾಲೆ ಕಾರ್ಯಕ್ರಮವನ್ನು ಎಂ ಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಅಮರೇಶ್ವರ ಮಹಾರಾಜರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾಗವಾಡ ತಾಲ್ಲೂಕಿನ ಕವಲಗುಡ್ಡ ಗ್ರಾಮದ ಕರಿಯೋಗ ಸಿದ್ದ ಶಾಲೆ ಕಾರ್ಯಕ್ರಮವನ್ನು ಎಂ ಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಹಾಗೂ ಅಮರೇಶ್ವರ ಮಹಾರಾಜರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.   

ಕಾಗವಾಡ: ಹಿಂದುಳಿದವರ, ದೀನ ದಲಿತರ, ಅಲ್ಪಸಂಖ್ಯಾತರ ಶ್ರೇಯಸ್ಸಿಗಾಗಿ  ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗಲಿರುಳು ಶ್ರಮಿಸುತ್ತಿದ್ದು ಅವರ ಇಚ್ಛೆಯಂತೆ ತಾವು ಕೂಡಾ ನಡೆಯುವುದಾಗಿ, ಅಹಿಂದ ಜನರ ಪರವಾಗಿ ಶ್ರಮಿಸುವುದಾಗಿ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಅವರು ತಾಲ್ಲೂಕಿನ ಕವಲಗುಡ್ಡ ಗ್ರಾಮದ ಕರಿಯೋಗಸಿದ್ದ ಶಾಲೆ ವೆಬ್ ಸೈಟ್ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಾಲಾ ಮಕ್ಕಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಬಹಳ ಮುಖ್ಯ. ಈಗಿನ ಮಕ್ಕಳಿಗೆ ಹಲವು ಸೌಲಭ್ಯಗಳು ಸಿಗುತ್ತಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಓದಿ ಜೀವನ ರೂಪಿಸಿಕೊಂಡು ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಬೇಕು ಎಂದರು.

ಅಮರೇಶ್ವರ ಮಹಾರಾಜರು ಗಡಿ ಭಾಗದಲ್ಲಿ ಕುಗ್ರಾಮದಲ್ಲಿ  ಶಿಕ್ಷಣ ನೀಡುವ ಉದ್ದೇಶದಿಂದ ಅನಾಥ ಹಾಗೂ ಬಡ ಮಕ್ಕಳ ಏಳಿಗೆಗಾಗಿ ಕನ್ನಡ ಮಾಧ್ಯಮದ ಶಿಕ್ಷಣ ಸಂಸ್ಥೆಯನ್ನು ತೆರದು ಮಕ್ಕಳಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ. ಅವರ ಕಾರ್ಯ ಶ್ಲಾಘನೀಯ. ಸಂಸ್ಥೆಗೆ ಒಂದು ಕೋಟಿ ರೂಪಾಯಿ ಅನುದಾನವನ್ನು ಈ ಭಾಗದ ಮಕ್ಕಳ ಶಿಕ್ಷಣದ ಉದ್ದೇಶದಿಂದ ಸದ್ಯದಲ್ಲೇ ಅನುದಾನ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.

ADVERTISEMENT

ಸಾನಿಧ್ಯವನ್ನು ಅಮರೇಶ್ವರ ಮಹಾರಾಜರು, ಜ್ಯೋತಿಲಕ್ಕಪ್ಪ ಮಹಾರಾಜರು, ಬನಸಿದ್ದ ಮಹಾರಾಜರು ವಹಿಸಿದ್ದರು. ಅತಿಥಿಗಳಾಗಿ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ ಸೋಮಣ್ಣ ಬೇವಿನಮರದ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಕೃಷಿ ಅಧಿಕಾರಿ ಎಚ್ ಡಿ ಕೋಳೆಕರ, ಗಜಾನನ ಮಂಗಸೂಳಿ, ಅಸ್ಲಂ ನಾಲಬಂದ, ಸತ್ಯಪ್ಪ ಬಾಗೆನ್ನವರ, ಮಿತೇಶ ಪಟ್ಟಣ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.