
ಸವದತ್ತಿ: ಬನದ ಹುಣ್ಣಿಮೆ ನಿಮಿತ್ತ ಏಳುಕೊಳ್ಳದ ನಾಡು ರೇಣುಕಾ ಯಲ್ಲಮ್ಮ ಸನ್ನಿಧಿಯಲ್ಲಿ ಜ. 3ರಿಂದ ವರ್ಷದ ಬಹುದೊಡ್ಡ ಜಾತ್ರೆ ನಡೆಯಲಿದೆ. ನೆರೆಯ ಮಹರಾಷ್ಟ್ರ, ಗೋವಾ, ತೆಲಂಗಾಣ ಸೇರಿ ರಾಜ್ಯ ವಿವಿಧೆಡೆ ಲಕ್ಷಾಂತರ ಭಕ್ತರು ಜಾತ್ರೆಯ ಸಂಭ್ರಮ ಸವಿಯಲು ದೇವಸ್ಥಾನದತ್ತ ಹರಿದು ಬರುತ್ತಿದ್ದಾರೆ.
ಬನದ ಹುಣ್ಣಿಮೆ ನಿಮಿತ್ತ ಶನಿವಾರ ಅಮ್ಮನವರಿಗೆ ಮೂರು ಹೊತ್ತು ವಿಶೇಷ ಪೂಜೆ, ಅರ್ಚನೆಗಳು ನೆರವೇರಲಿವೆ. ಲಕ್ಷಾಂತರ ಭಕ್ತರಿಗೆ ಒಂದೇ ಸಮಯದಲ್ಲಿ ಸಾಧ್ಯವಾಗದ ದರ್ಶನ ಭಾಗ್ಯಕ್ಕೆ ಪರ್ಯಾಯವಾಗಿ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ. ಜೊತೆಗೆ ದೇವಸ್ಥಾನದ ಅಂದವನ್ನು ಹೆಚ್ಚಿಸಲು ದೇವಸ್ಥಾನದ ಸುತ್ತ ವಿದ್ಯುತ್ ದೀಪಾಲಂಕಾರ ಹಾಗೂ ಯಲ್ಲಮ್ಮ ದೇವಿ, ಪರಶುರಾಮ ಸೇರಿ ಹಲವು ದೇವತೆಗಳ ರೂಪದಲ್ಲಿ ಲೈಟಿಂಗ್ ರೂಪಕಗಳನ್ನು ಇರಿಸಲಾಗಿದೆ. ಬಂದ ಭಕ್ತರಿಗೆ ಸ್ವಚ್ಛತಾ ಸೌಕರ್ಯ ಸೇರಿ ಇತರೆ ಸೌಲಭ್ಯಗಳನ್ನು ಒದಗಿಸುವ ಕಾರ್ಯ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಭರದಿಂದ ಸಾಗಿದೆ.
ಸುಗಮ ಸಂಚಾರಕ್ಕೆ ರಸ್ತೆಗಳ ಅಗಲೀಕರಣ, ಬ್ಯಾರಿಕೇಡರ್ ಅಳವಡಿಕೆ ಹಾಗೂ ಏಕ ಮುಖಿ ಸಂಚಾರದಂತೆ ಹಲವು ಕಾರ್ಯಗಳು ನಡೆದಿವೆ. ಜೊತೆಗೆ ಚಕ್ಕಡಿ, ವಾಹನಗಳ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್, ಭಕ್ತರಿಗಾಗಿ ವಸತಿ ವ್ಯವಸ್ಥೆ ಸೇರಿ ಹಲವು ಅನುಕೂಲಗಳನ್ನು ಕಲ್ಪಿಸಲಾಗಿದೆ. ಜಾತ್ರಾ ಸಮಯದಲ್ಲಿ ಮದ್ಯ ನಿಷೇಧದ ಕುರಿತು ಅಬಕಾರಿ ಇಲಾಖೆ ಈಗಗಾಲೇ ನಿಗಾವಹಿಸಿದೆ.
ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ವಿಶೇಷ ವಿದ್ಯುತ್ ಚಾಲಿತ ವಾಹನಗಳನ್ನು ನಿಯೋಜಿಸಲಾಗಿದೆ. ಶಿಶು ಅಭಿವೃದ್ಧಿ ಇಲಾಖೆಯಿಂದ ಮೌಢ್ಯ ವಿರೋಧಿ ಜಾಥಾ ಆಯೋಜಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜೋಗುಳಭಾವಿ ಸತ್ಯಮ್ಮ ದೇವಸ್ಥಾನದ ಹತ್ತಿರ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿ ಆಗಮಿಸುತ್ತಿರುವ ವಾಹನ ನಿಲುಗಡೆ ಮಾಡುತ್ತಿರುವರಿಂದ ಸಂಚಾರ ದಟ್ಟಣೆಯ ಸಮಸ್ಯೆ ತಲೆದೋರುತ್ತಿದ್ದು ಪೊಲೀಸ್ ಇಲಾಖೆ ನಿಯಂತ್ರಣದಲ್ಲಿ ತೊಡಗಿದೆ.
ಯಲ್ಲಮ್ಮ ದೇವಿ ಪರಶುರಾಮ ಸೇರಿ ಹಲವು ದೇವತೆಗಳ ರೂಪದಲ್ಲಿ ಲೈಟಿಂಗ್ ರೂಪಕಗಳ ಅಳವಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.