ADVERTISEMENT

ಅಂಗಡಿ ಮಾಲೀಕ ಸೇರಿ ಮೂವರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 20:23 IST
Last Updated 16 ಡಿಸೆಂಬರ್ 2013, 20:23 IST

ಬೆಂಗಳೂರು: ಮಹದೇವಪುರ, ವಿವೇಕನಗರ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ದಿನಸಿ ಅಂಗಡಿ ಮಾಲೀಕ ಸೇರಿ ಮೂರು ಮಂದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ಎ.ನಾರಾಯಣಪುರ ಸಮೀಪದ ಇಂದಿರಾಗಾಂಧಿ ರಸ್ತೆಯಲ್ಲಿ ಭಾನುವಾರ ಮೋಹನಾನ್‌ ಪಿಳ್ಳೈ (55) ಎಂಬುವರು ಅಂಗಡಿಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಕೇರಳ ಮೂಲದ ಮೋಹನಾನ್‌, ಐದು ವರ್ಷಗಳ ಹಿಂದೆ ನಗರಕ್ಕೆ ಬಂದು ಮಗಳು ಬಿಂದು ಹಾಗೂ ಅಳಿಯ ಉದಯ್‌ ಜತೆ ವಾಸವಾಗಿದ್ದರು. ಮನೆ ಸಮೀಪವೇ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಅವರು, ಭಾನುವಾರ ರಾತ್ರಿ ಊಟ ಮುಗಿಸಿಕೊಂಡು ಅಂಗಡಿಯಲ್ಲೇ ಮಲಗುವುದಾಗಿ ಹೇಳಿ ಹೋಗಿದ್ದಾರೆ.

ಬೆಳಿಗ್ಗೆ ಎಂಟು ಗಂಟೆಯಾದರೂ ಬಾಗಿಲು ತೆಗೆಯದ ಕಾರಣ ಅನುಮಾನಗೊಂಡ ಅಳಿಯ, ಷೆಟರ್‌ ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

‘ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರಿಂದ ತಂದೆ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಬಿಂದು ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವೇಕನಗರ: ರುದ್ರಪ್ಪಗಾರ್ಡನ್‌ನಲ್ಲಿ ಸಂತೋಷ್‌ (31) ಎಂಬ ಬಡಗಿ ನೇಣು ಹಾಕಿಕೊಂಡಿದ್ದಾರೆ. ಜ್ಯೋತಿ ಎಂಬುವರನ್ನು ವಿವಾಹವಾಗಿದ್ದ ಸಂತೋಷ್‌ಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಪತ್ನಿ ಮೂರು ದಿನಗಳ ಹಿಂದೆ ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ಹೋಗಿದ್ದರು. ಹೀಗಾಗಿ ಮನೆಯಲ್ಲಿ
ಒಬ್ಬರೇ ಇದ್ದ ಸಂತೋಷ್‌, ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಭಾನುವಾರ ಸಂಜೆ ಏಳು ಗಂಟೆ ಸುಮಾರಿಗೆ ಸಂತೋಷ್‌ ಮನೆಯಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು. ಆತ್ಮಹತ್ಯೆಗೆ ಖಚಿತ ಕಾರಣ ಗೊತ್ತಾಗಿಲ್ಲ. ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮಾಕ್ಷಿಪಾಳ್ಯ: ಕಾಮಾಕ್ಷಿಪಾಳ್ಯದಲ್ಲಿ ರಾಜ್‌ (27) ಎಂಬ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್‌ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಮಾಕ್ಷಿಪಾಳ್ಯ ಮುಖ್ಯರಸ್ತೆಯಲ್ಲಿರುವ ಶ್ರೀಧಾಮ್‌ ಪಾಲಿಟೆಕ್ನಿಕ್‌ ಎಂಬ ಕಾರ್ಖಾನೆಯಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿದ್ದ ರಾಜ್, ಕಾರ್ಖಾನೆ ಆವರಣದಲ್ಲೇ ಶೆಡ್‌ನಲ್ಲಿ ವಾಸವಾಗಿದ್ದರು. ಭಾನುವಾರ ರಾತ್ರಿ ಶೆಡ್‌ನಲ್ಲೇ ನೇಣು ಹಾಕಿಕೊಂಡಿದ್ದು, ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್‌ ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಕಾಮಾಕ್ಷಿಪಾಳ್ಯ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.