ಬೆಂಗಳೂರು: ‘ಅಂತರ್ಜಲದ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡುವುದೇ ಜಲಸಂರಕ್ಷಣೆಗೆ ಇರುವ ಮಾರ್ಗ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಭಿಪ್ರಾಯಪಟ್ಟರು.
ಕೇಂದ್ರೀಯ ಅಂತರ್ಜಲ ಮಂಡಳಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಜಲ ಸಂರಕ್ಷಣೆ– ಹಿನ್ನೋಟ ಮತ್ತು ಮುನ್ನೋಟ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ಅನುದಾನವು ನೀರು ಸಂಗ್ರಹಿಸಿಡುವ ಕೃತಕ ಟ್ಯಾಂಕ್‌ಗಳ ನಿರ್ಮಾಣ ಸೇರಿದಂತೆ ನೀರಿನ ಸಂರಕ್ಷಣೆಗೆ ಬಳಕೆಯಾಗುತ್ತಿದೆ. ಈವರೆಗೆ ಸುಮಾರು ₨1 ಸಾವಿರ ಕೋಟಿಯನ್ನು ಈ ಯೋಜನೆಗೆ ಬಳಸಲಾಗಿದೆ’ ಎಂದು ಹೇಳಿದರು.
‘ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗದ ಹಲವೆಡೆ ನೀರಿನ ಸಮಸ್ಯೆಯು ತೀವ್ರವಾಗಿದ್ದು, ಸಾಮಾನ್ಯ ಜನರು ಎಚ್ಚೆತ್ತುಕೊಳ್ಳದೇ ಇದ್ದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಆರ್.ಎಚ್.ಸಾವುಕಾರ್, ‘ಜೀವಜಲ ಉಳಿಸುವ ಸಲುವಾಗಿ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದರೂ, ಅವುಗಳು ಪುಸ್ತಕದಲ್ಲಿ ಹಾಗೇ ಉಳಿದಿದೆ’ ಎಂದರು.
‘ಅರಬ್ ದೇಶಗಳಲ್ಲಿ ನೀರಿನ ಸಂರಕ್ಷಣೆಗೆ ನೀಡುವಷ್ಟು ಮಹತ್ವವನ್ನು ನಮ್ಮ ದೇಶದಲ್ಲಿ ನೀಡಲಾಗುತ್ತಿಲ್ಲ. ನೀರಿನ ಪೋಲಾಗುವಿಕೆಯನ್ನು ತಡೆಯುವುದರಿಂದ ಅರ್ಧದಷ್ಟು ನೀರಿನ ಅಭಾವವನ್ನು ತಗ್ಗಿಸಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.