ADVERTISEMENT

ಅಂತರ್ಜಲ ನಿರ್ವಹಣೆಗೆ ನಿಯಮಾವಳಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 18:15 IST
Last Updated 21 ಏಪ್ರಿಲ್ 2012, 18:15 IST

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ಸಂರಕ್ಷಣೆಗೆ ರೂಪಿಸಿರುವ ಕರ್ನಾಟಕ ಅಂತರ್ಜಲ ಅಭಿವೃದ್ಧಿ,ನಿರ್ವಹಣೆ ಮತ್ತು ನಿಯಂತ್ರಣ ಮಸೂದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲಾಗಿದೆ ಎಂದು ಜಲಮಂಡಳಿ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಬೆಂಗಳೂರು ಜಲಮಂಡಳಿಯ ಸಮ್ಮೇಳನ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಶನಿವಾರ ಸಭೆ ನಡೆಸಿದ ನಂತರ ಸಚಿವರು ಈ ವಿಷಯ ತಿಳಿಸಿದರು. ಅಂತರ್ಜಲ ಸಂರಕ್ಷಣೆಯ ಉದ್ದೇಶದಿಂದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಪ್ರಾಧಿಕಾರ ರಚನೆ ಯಾ ಗಿದೆ.  ರಾಜ್ಯದಲ್ಲೂ ಈ ನಿಟ್ಟಿನಲ್ಲಿ ನಿರ್ದೇಶನಾಲಯ ಸ್ಥಾಪಿಸುವ ಅಗತ್ಯವಿದೆ. ಇದೇ 26ರಂದು ನಡೆಯುವ ಉನ್ನತ ಮಟ್ಟದ ಸಭೆ ಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದೆಂದು ಅವರು ಹೇಳಿದರು.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಉನ್ನತಾಧಿಕಾರಿಗಳ ಸಭೆ ಕರೆದು ನಿರ್ದೇಶನಾಲಯದ ವ್ಯಾಪ್ತಿಯನ್ನು ಗುರುತಿಸಲಾಗುವುದು ಎಂದರು.
ಟ್ಯಾಂಕರ್ ಮೂಲಕ ವಿತರಿಸುತ್ತಿರುವ ನೀರಿನ ಗುಣಮಟ್ಟ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
 
ಈ ಹಿನ್ನೆಲೆಯಲ್ಲಿ ಎಲ್ಲಿಂದ ನೀರು ಸಂಗ್ರಹಿಸ ಲಾಗು ತ್ತಿದೆ, ಯಾರಿಗೆ ವಿತರಣೆ ಮಾಡಲಾಗುತ್ತಿದೆ, ನೀರಿನ ದರ ಕುರಿತು ಟ್ಯಾಂಕರ್ ಮಾಲೀಕರು ಮಾಹಿತಿ ಹೊಂದಿರಬೇಕು ಎಂದು ಅವರು ಸೂಚನೆ ನೀಡಿದರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅರವಿಂದ ಶ್ರೀವಾತ್ಸವ, ಜಲಮಂಡಳಿ ಅಧ್ಯಕ್ಷ ಗೌರವ್ ಗುಪ್ತ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.