ADVERTISEMENT

ಅಂತರ ರಾಷ್ಟ್ರೀಯ ಆರೋಗ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಬೆಂಗಳೂರು: ಜೀವನ ಶೈಲಿಯ ಕಾರಣಕ್ಕಾಗಿ ಬರುವ ರಕ್ತದೊತ್ತಡ, ಮಧುಮೇಹ, ಬೊಜ್ಜು, ಕೆಳ ಬೆನ್ನು ನೋವು ಮೊದಲಾದ ರೋಗಗಳನ್ನು ಯೋಗ ಮತ್ತು ಪ್ರಕೃತಿ ಚಿಕಿತ್ಸಾ (ನ್ಯಾಚುರೊಪತಿ) ವಿಧಾನದಿಂದ ಗುಣಪಡಿಸಬಹುದು ಎಂದು ಆಯುಷ್ ಇಲಾಖೆಯ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ತಿಳಿಸಿದರು.

`ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳ ಮೂಲಕ ವಿವಿಧ ರೋಗಗಳನ್ನು ಗುಣಪಡಿಸುವ ಬಗ್ಗೆ ಕೈಗೊಂಡಿರುವ ಸಂಶೋಧನೆಗಳನ್ನು ಆಯುಷ್ ಇಲಾಖೆ ಉತ್ತೇಜಿಸುತ್ತಿದೆ. ಅಂತಹ ಸಂಶೋಧನೆ ಆಧಾರದಲ್ಲಿ ಇವೆರಡು ವಿಧಾನಗಳು ರೋಗ ನಿವಾರಣೆಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳಾಗಿವೆ ಎಂಬುದನ್ನು ನಾವು ಘೋಷಿಸುತ್ತಿದ್ದೇವೆ~ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಯೋಗ, ಪ್ರಕೃತಿ ಚಿಕಿತ್ಸೆ, ಆಯುರ್ವೇದ ಮೊದಲಾದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳನ್ನು ಉತ್ತೇಜಿಸುವ ಸಲುವಾಗಿ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಈ ತಿಂಗಳ 9ರಿಂದ 13ರವರೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ವಿಧಾನಗಳ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಆರೋಗ್ಯ ಎಕ್ಸ್‌ಪೋ- 2012 ಅನ್ನು ಏರ್ಪಡಿಸಲಾಗಿದೆ.
 
ಈ ವಿಧಾನಗಳಲ್ಲಿ ಆಗುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಜನ ಸಾಮಾನ್ಯರಿಗೆ ತಲುಪಿಸಲು ಈ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ~ ಎಂದು ಅವರು ಹೇಳಿದರು.

`ಈ ಸಮ್ಮೇಳನದಲ್ಲಿ 500 ಮಂದಿ ವಿದೇಶಿಯರು ಸೇರಿದಂತೆ ಒಟ್ಟು 5,000 ಮಂದಿ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಯೋಗ ಪರಿಣತರು, ಆರೋಗ್ಯ ವೃತ್ತಿಪರರು, ವಿದ್ಯಾರ್ಥಿಗಳು, ಬರಹಗಾರರು, ಶಿಕ್ಷಣ ತಜ್ಞರು, ನೀತಿ ನಿರೂಪಕರು ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ವಸ್ತು ಪ್ರದರ್ಶನಕ್ಕೆ 5 ಲಕ್ಷ ಮಂದಿ ಭೇಟಿ ನೀಡುವ ನಿರೀಕ್ಷೆ ಇದೆ~ ಎಂದರು.

ಧರ್ಮಸ್ಥಳದ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ್ ಶೆಟ್ಟಿ ಮಾತನಾಡಿ, `ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳು ಭಾರತೀಯ ಸಮಾಜದ ಜೀವನಶೈಲಿಯಲ್ಲೇ ಅಂತರ್ಗತವಾಗಿವೆ. ದುರದೃಷ್ಟವಶಾತ್ ಭಾರತೀಯ ವೈದ್ಯಪದ್ಧತಿಯ ಲಾಭಗಳ ಕುರಿತು ಬಹಳಷ್ಟು ಮಂದಿಗೆ ಅರಿವಿಲ್ಲ. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳ ಮೌಲ್ಯಮಾಪನ ಆಗಿದೆ~ ಎಂದರು.

`ಯೋಗಾಭ್ಯಾಸ, ವಿಶ್ರಮಿಸಿಕೊಳ್ಳುವಿಕೆ, ಧ್ಯಾನ, ತೈಲ ಮಸಾಜ್, ಒತ್ತಡ ನಿರ್ವಹಣೆ, ವೈಯಕ್ತಿಕ ಸಮಾಲೋಚನೆ ಮೊದಲಾದ ವಿಧಾನಗಳು ರೋಗ ತಡೆ ಮತ್ತು ಪರಿಹಾರಕ್ಕೆ ಪರಿಣಾಮಕಾರಿಯಾಗಿವೆ ಎಂದು ನಮ್ಮಲ್ಲಿ ಬರುವ ರೋಗಿಗಳು ದೃಢಪಡಿಸಿದ್ದಾರೆ~ ಎಂದರು.

ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್. ಶಂಕರ್ ಮಾತನಾಡಿ, `ನಾನು ರಕ್ತದೊತ್ತಡ, ಕತ್ತು ಮತ್ತು ಬೆನ್ನು ನೋವಿನಿಂದ ಬಳಲುತ್ತಿದ್ದೆ. 9 ವರ್ಷಗಳಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುತ್ತಿದ್ದೇನೆ. ಆಹಾರ ಪದ್ಧತಿ ಮತ್ತು ಜೀವನ ಶೈಲಿಯಲ್ಲೂ ಬದಲಾವಣೆ ಮಾಡಿಕೊಂಡೆ. ಪರಿಣಾಮವಾಗಿ ನನ್ನ ಆರೋಗ್ಯ ತೊಂದರೆಗಳು ನಿವಾರಣೆಯಾಗಿವೆ~ ಎಂದರು.

`ಆರೋಗ್ಯ ಕಾರ್ಯಕ್ರಮಗಳಿಗೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದರೆ ಬಹಳಷ್ಟು ಕಾಯಿಲೆಗಳು ಬರದಂತೆ ತಡೆಯಬಹುದು. ಹೀಗಾಗಿ ಆಯುಷ್ ಇಲಾಖೆ ಕಾರ್ಯಕ್ರಮಗಳಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಹಣ ನೀಡಬೇಕು~ ಎಂದು ಅವರು ಒತ್ತಾಯಿಸಿದರು.

ವೈದ್ಯೆ ಡಾ.ವಂದನಾ ಮಾತನಾಡಿ, `ಅಲೋಪತಿ ವೈದ್ಯಳಾದ ನಾನು ಅಧಿಕ ರಕ್ತದೊತ್ತಡ, ಉಸಿರಾಟ ವ್ಯವಸ್ಥೆಗೆ ಸಂಬಂಧಿಸಿದ ಅಲರ್ಜಿ ಮೊದಲಾದ ಸಮಸ್ಯೆಗಳಿದ್ದವು. ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದ ಮೇಲೆ ನನ್ನ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ರೋಗಕ್ಕೆ ಚಿಕಿತ್ಸೆ ನೀಡುವ ಅಲೋಪತಿ ವಿಧಾನಕ್ಕಿಂತ ರೋಗಿಗೆ ಸಮಗ್ರ ಚಿಕಿತ್ಸೆ ನೀಡುವ ಪ್ರಕೃತಿ ಚಿಕಿತ್ಸೆ ಉತ್ತಮ ಎಂಬುದು ನನ್ನ ಅನಿಸಿಕೆ~ ಎಂದರು.

ಬಾಲಕ ಧನುಷ್ ಮಾತನಾಡಿ, `2003ರಿಂದ ನನಗೆ ಮಧುಮೇಹ. ನಾನು ನಿತ್ಯ ಹೆಚ್ಚಿನ ಪ್ರಮಾಣದ ಇನ್ಸುಲಿನ್ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇತ್ತೀಚೆಗೆ ಸ್ವಾಮಿ ವಿವೇಕಾನಂದ ಯೋಗ ಮತ್ತು ಸಂಸ್ಥಾನದಲ್ಲಿ ನಾನು ಯೋಗ ಮತ್ತು ಪಥ್ಯಾಹಾರ ಚಿಕಿತ್ಸೆ ಪಡೆದ ಮೇಲೆ ಕಡಿಮೆ ಪ್ರಮಾಣದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ~ ಎಂದರು.

ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ತಮ್ಮ ತೂಕ, ಬೆನ್ನು ನೋವು ಕಡಿಮೆ ಆಯಿತು ಎಂದು ಮಾಜಿ ಕುಸ್ತಿಪಟು ಮಾರಪ್ಪ (87 ವರ್ಷ) ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.