ADVERTISEMENT

ಅಂತಿಮ ದಿನ ನಾಮಪತ್ರ ಸಲ್ಲಿಕೆ ಭರಾಟೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 20:22 IST
Last Updated 17 ಏಪ್ರಿಲ್ 2013, 20:22 IST

ಯಲಹಂಕ: ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಟ್ಟು 16 ಹಾಗೂ ಬ್ಯಾಟರಾಯನಪುರ ಕ್ಷೇತ್ರದಲ್ಲಿ 20 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಬುಧವಾರ, ಯಲಹಂಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಎನ್. ಗೋಪಾಲಕೃಷ್ಣ ನಾಮಪತ್ರ ಸಲ್ಲಿಸಿದರು.

ಉಳಿದಂತೆ ವೇಣುಗೋಪಾಲರಾವ್ (ಕೆಜೆಪಿ) ಈರಣ್ಣ (ಬಿಎಸ್‌ಪಿ)  ಮಹೇಶ್.ಪಿ (ಬಿಎಸ್‌ಆರ್ ಕಾಂಗ್ರೆಸ್) ನಾರಾಯಣಸ್ವಾಮಿ ಬಿ.ಎನ್ (ಜೆಡಿಯು)  ಎಸ್.ಎಸ್.ಸರಿತ, (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಪದ್ಮಶ್ರೀ (ರಾಣಿ ಚನ್ನಮ್ಮ ಪಾರ್ಟಿ) ಹಾಗೂ 7 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬ್ಯಾಟರಾಯನಪುರ ಕ್ಷೇತ್ರದಿಂದ ಈಗಾಗಲೆ ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದ ಕೃಷ್ಣಬೈರೇಗೌಡ, ಬುಧವಾರ ಅಧಿಕೃತವಾಗಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಕೊಡಿಗೆಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು, ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಬ್ಯಾಟರಾಯನಪುರದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಭಾರಿ ಸಂಖ್ಯೆಯ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಬ್ಯಾಟರಾಯನಪುರ ಸಿಗ್ನಲ್ ಬಳಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು.  ಭದ್ರತೆಗಾಗಿ  ನಾಗಾಲ್ಯಾಂಡ್ ಸಶಸ್ತ್ರ ಪೊಲೀಸ್ ತುಕಡಿಯ 28, ಸಿಆರ್‌ಪಿಎಫ್‌ನ 20 ಪೊಲೀಸರು, ಮೂವರು ಇನ್ಸ್‌ಪೆಕ್ಟರ್, ನಾಲ್ಕು ಮಂದಿ ಸಬ್‌ಇನ್ಸ್‌ಪೆಕ್ಟರ್ ಒಳಗೊಂಡಂತೆ 15 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಉಳಿದಂತೆ ಮಂಜುನಾಥ್ (ಕೆಜೆಪಿ), ವಿನಾಯಕ ಸುಬ್ರಮಣಿ(ಬಿಎಸ್‌ಆರ್‌ಕಾಂಗ್ರೆಸ್), ಸುರೇಶ್(ಬಿಎಸ್‌ಪಿ), ಮಜೀರ್ ಪಾಷ(ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಶಾಂತಕುಮಾರಿ (ಮಹಿಳಾ ಪ್ರಧಾನ ಪಕ್ಷ), ಯೋಗಯ್ಯ (ಲೋಕಸತ್ತಾ ಪಕ್ಷ) ಹಾಗೂ  7 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT