ADVERTISEMENT

ಅಂಬೇಡ್ಕರ್, ಲೋಹಿಯಾ ಮಹಾನ್ ತ್ಯಾಗಜೀವಿಗಳು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಬೆಂಗಳೂರು: `ಅಂಬೇಡ್ಕರ್ ಮತ್ತು ಲೋಹಿಯಾ ಅವರು ಮಹಾನ್ ಪ್ರಜಾಪ್ರಭುತ್ವವಾದಿಗಳು, ತ್ಯಾಗಜೀವಿಗಳಾಗಿದ್ದರು~ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅಭಿಪ್ರಾಯಪಟ್ಟರು.

ಗ್ರಾಮಭಾರತ ಸಾಂಸ್ಕೃತಿಕ ವೇದಿಕೆ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗಾಂಧಿ- ಅಂಬೇಡ್ಕರ್-ಲೋಹಿಯಾ ಮತ್ತು ಕನ್ನಡ ಪ್ರಜ್ಞೆ ಕುರಿತ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಮೂವರು ನಾಯಕರು ತಮ್ಮ ಜೀವನದಲ್ಲಿ ಎಂದಿಗೂ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡದೆ, ಸಮಾಜದ ಪರವಾಗಿ ನಿಂತಿದ್ದರು. ಜಾತಿ ಪದ್ದತಿ ನಿರ್ಮೂಲನೆಗಾಗಿ ಅಂತರ್‌ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು~ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, `ಗಾಂಧೀಜಿ ಅವರಿಗಿಂತಲೂ ಅಂಬೇಡ್ಕರ್ ಮತ್ತು ಲೋಹಿಯಾ ಅವರಿಗೆ ಅಪಾರ ಬೌದ್ಧಿಕ ಸಾಮರ್ಥ್ಯ ಹಾಗೂ ಜಾಗತಿಕ ದೃಷ್ಟಿಕೋನವಿತ್ತು. ಆದ್ದರಿಂದಲೇ ಅಂಬೇಡ್ಕರ್ ಗಾಂಧಿವಾದ ಮತ್ತು ಮಾರ್ಕ್ಸ್‌ವಾದಗಳ ನಡುವೆ ಪರ್ಯಾಯವನ್ನು ಹುಡುಕು ವಂತಹ ಕೆಲಸ ಮಾಡಿದರು~ ಎಂದರು.

`ಕರ್ನಾಟಕದ ಭೂ ಹೋರಾಟಗಳು~ ವಿಷಯದ ಬಗ್ಗೆ  ಮಾತನಾಡಿದ ಸಾಹಿತಿ ಪೀರ್ ಭಾಷ ಗಾಂಧಿ, `ಅಂಬೇಡ್ಕರ್ ಮತ್ತು ಲೋಹಿಯಾ ಅವರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ತೂಗಲಾಗುವುದಿಲ್ಲ. ಇವರುಗಳ ನಡುವೆ ಸಾಕಷ್ಟು ವೈರುಧ್ಯಗಳಿವೆ~ ಎಂದರು.

ಗಾಂಧಿ-ಅಂಬೇಡ್ಕರ್-ಲೋಹಿಯಾ-ಚಳವಳಿಗಳು ಕುರಿತು ಡಾ.ಬಂಜಗೆರೆ ಜಯಪ್ರಕಾಶ್, ದಲಿತ ಸಾಹಿತ್ಯದ ಮೇಲೆ ಅಂಬೇಡ್ಕರ್ ಪ್ರಭಾವ ಕುರಿತು ಪ್ರೊ.ಸಿ.ಕೆ. ಮಹೇಶ್, ಕರ್ನಾಟಕ ರಾಜಕಾರಣದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ ಪ್ರಭಾವ ಕುರಿತು ದಿನೇಶ್ ಅಮಿನ್ ಮಟ್ಟು, ಗಾಂಧಿ, ಅಂಬೇಡ್ಕರ್ ವಾದದ ತಾತ್ವಿಕ ಚಿಂತನೆಗಳು ಮತ್ತು ರಂಗಭೂಮಿ ಕುರಿತು ಬಸವಲಿಂಗಯ್ಯ ವಿಚಾರ ಮಂಡಿಸಿದರು.ಗ್ರಾಮಭಾರತ ಸಾಂಸ್ಕೃತಿಕ ವೇದಿಕೆಯ ರಾಜಶೇಖರ್ ಕಿಗ್ಗ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.