ADVERTISEMENT

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌: ನ್ಯಾಯಾಂಗ ತನಿಖೆಗೆ ವಹಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 19:52 IST
Last Updated 27 ಅಕ್ಟೋಬರ್ 2017, 19:52 IST

ಬೆಂಗಳೂರು: ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ನಡೆದಿರುವ ಅವ್ಯವಹಾರಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.

‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹ 90 ಕೋಟಿ ನೀಡಿತ್ತು. ಆದರೆ, ಉನ್ನತ ಶಿಕ್ಷಣ ಪರಿಷತ್ತು, ಸಚಿವ ಸಂಪುಟದ  ಒಪ್ಪಿಗೆ ಇಲ್ಲದೆ ಕಟ್ಟಡದ ಕಾಮಗಾರಿಗಳ ವೆಚ್ಚವನ್ನು ₹ 149 ಕೋಟಿಗೆ ಹೆಚ್ಚಿಸಿ ಕರ್ನಾಟಕ ಗೃಹ ಮಂಡಳಿಗೆ ವಹಿಸಲು ಅನುಮೋದನೆ ನೀಡಿದೆ. ಅಲ್ಲದೆ, ₹ 190 ಕೋಟಿಗೆ ಅಂದಾಜು ಪಟ್ಟಿ ತಯಾರಿಸಲಾಗಿದೆ. ಇಡೀ ಅಕ್ರಮ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ನಿರ್ದೇಶನದ ಮೇರೆಗೆ ನಡೆದಿದೆ. ಈ ಬಗ್ಗೆ ತನಿಖೆ ನಡೆಸದಿದ್ದರೆ ನೂರಾರು ಕೋಟಿ ರೂಪಾಯಿ ಲೂಟಿಗೆ ಅವಕಾಶ ನೀಡಿದಂತಾಗುತ್ತದೆ’ ಎಂದು ಅವರು ಶುಕ್ರವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಎಚ್ಚರಿಸಿದರು.

ಅನುಕೂಲಕ್ಕೆ ತಕ್ಕಂತೆ ಹಣ ವರ್ಗಾಯಿಸಬಹುದು ಎಂಬ ಉದ್ದೇಶದಿಂದಲೇ ಎಕನಾಮಿಕ್ಸ್‌ ಸ್ಕೂಲ್‌ನ ಎಲ್ಲ ಹಣಕಾಸಿನ ವ್ಯವಹಾರಗಳನ್ನು ಉನ್ನತ ಶಿಕ್ಷಣ ಪರಿಷತ್ ವ್ಯಾಪ್ತಿಗೆ ತರಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ. ರಾಯರಡ್ಡಿ ಅವರು ತಮಗೆ ಬೇಕಾದ ಅಧಿಕಾರಿಗಳನ್ನು ಅಲ್ಲಿ ಕೂಡಿಸಿದ್ದಾರೆ. ಹಣ ದುರುಪಯೋಗ ತಡೆಯಲು ಪ್ರಯತ್ನಿಸಿದ ಅಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದರು.

ADVERTISEMENT

ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಸ್ಕೂಲ್ ಆಫ್‌ ಎಕನಾಮಿಕ್ಸ್‌, ಉನ್ನತ ಶಿಕ್ಷಣ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಉನ್ನತ ಶಿಕ್ಷಣ ಪರಿಷತ್ತು ಮಧ್ಯೆ ನಡೆದಿರುವ ಎಲ್ಲ ಪತ್ರ ವ್ಯವಹಾರಗಳನ್ನು ಕೂಡಲೇ ಬಹಿರಂಗಪಡಿಸಬೇಕು ಎಂದು ರಮೇಶ್‌ಬಾಬು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.