ADVERTISEMENT

ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಬೆಂಗಳೂರು: ನಗರದ ವಿವಿಧೆಡೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಕಟ್ಟಡಗಳನ್ನು ಬಿಬಿಎಂಪಿ ಶನಿವಾರ ತೆರವುಗೊಳಿಸಿತು. ಯಲಹಂಕದ ಥಣಿಸಂದ್ರ, ರಾಜರಾಜೇಶ್ವರಿನಗರದ ಶ್ರೀಗಂಧದ ಕಾವಲು ಹಾಗೂ ಜವರೇಗೌಡನದೊಡ್ಡಿಗಳಲ್ಲಿ ಪೊಲೀಸರ ನೆರವಿನೊಂದಿಗೆ ಬಿಬಿಎಂಪಿ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.

ಯಲಹಂಕ ಬಳಿಯ ಥಣಿಸಂದ್ರ ಗ್ರಾಮದಲ್ಲಿ ಹಾದುಹೋಗುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ 12 ಮನೆಗಳನ್ನು ನೆಲಸಮ ಮಾಡಲಾಯಿತು. ಪಾಲಿಕೆ ಆಯುಕ್ತರ ಆದೇಶದ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.

ಬೃಹತ್ ನೀರುಗಾಲುವೆ ಕಾರ್ಯಪಾಲಕ ಎಂಜಿನಿಯರ್ ಬಿ.ಎಸ್. ಪ್ರಹ್ಲಾದ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಘವೇಂದ್ರ ಅವರ ನೇತೃತ್ವದ ತಂಡ, ಬಿಎಂಟಿಎಫ್ ಸಿಬ್ಬಂದಿ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.  

ರಾಜರಾಜೇಶ್ವರಿನಗರದ ಶ್ರೀಗಂಧದ ಕಾವಲು ಸಮೀಪದ ಕೆರೆಯನ್ನು ಒತ್ತುವರಿ ಮಾಡಿಕೊಂಡು 1 ಎಕರೆ 28 ಗುಂಟೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಮನೆ ಹಾಗೂ ಕಾಂಪೌಂಡ್‌ಗಳನ್ನು ಪಾಲಿಕೆಯ ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತೆರವುಗೊಳಿಸಿದರು.

ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ ಬಡಾವಣೆಯ ಜವರೇಗೌಡನದೊಡ್ಡಿ ಹತ್ತಿರ ಉದ್ಯಾನದಲ್ಲಿ ಮುನಿಯಪ್ಪ ಎಂಬುವವರು ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಉದ್ಯಾನದ ತಂತಿಬೇಲಿ ಕಾಮಗಾರಿ ನಡೆಸದಂತೆ ತಡೆಯುಂಟು ಮಾಡುತ್ತಿದ್ದರು. ಈ ಪ್ರದೇಶವನ್ನು ಪೊಲೀಸರು ಹಾಗೂ ಬಿಬಿಎಂಪಿ ಯೋಜನಾ ವಿಭಾಗದ ಸಿಬ್ಬಂದಿ ನೆರವಿನಿಂದ ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.