ADVERTISEMENT

ಅಕ್ರಮ ಪಡಿತರ ವಶ: ಮೂರು ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 19:10 IST
Last Updated 26 ಫೆಬ್ರುವರಿ 2011, 19:10 IST

ಬೆಂಗಳೂರು: ಆಹಾರ ಪದಾರ್ಥಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮುಗಳ ಮೇಲೆ ಶನಿವಾರ ದಾಳಿ ನಡೆಸಿದ ಕೆ.ಆರ್.ಪುರ ಮತ್ತು ಬಾಣಸವಾಡಿ ಪೊಲೀಸರು ತಲಾ 50 ಕೆ.ಜಿ ತೂಕದ 247 ಚೀಲ ಅಕ್ಕಿ, 22 ಚೀಲ ಗೋಧಿ ಮತ್ತು 400ಕ್ಕೂ ಹೆಚ್ಚು ಕುಸುಬಲು ಅಕ್ಕಿ ಚೀಲಗಳನ್ನು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ.

ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುವ ಅಕ್ಕಿ ಮತ್ತು ಗೋಧಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ ಬಾಣಸವಾಡಿ ಪೊಲೀಸರು ಸುಬ್ಬಯ್ಯನಪಾಳ್ಯದ ವೆಂಗಯ್ಯ (40) ಎಂಬಾತನನ್ನು ಬಂಧಿಸಿ ಸುಮಾರು 12 ಟನ್ ಅಕ್ಕಿ ಮತ್ತು ಒಂದು ಟನ್ ಗೋಧಿ ವಶಪಡಿಸಿಕೊಂಡಿದ್ದಾರೆ.

ವೆಂಗಯ್ಯ ಪಡಿತರ ಚೀಟಿಗೆ ನೀಡಲಾಗುವ ಅಕ್ಕಿ ಮತ್ತು ಗೋಧಿಯನ್ನು ಖರೀದಿಸಿ ಕಮ್ಮನಹಳ್ಳಿಯ ಮುನಿಸ್ವಾಮಪ್ಪ ಲೇಔಟ್‌ನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ. ಆತ ಅಕ್ಕಿಗೆ ಪಾಲಿಷ್ ಮಾಡಿಸಿ ಬೇರೆ ಚೀಲಗಳಿಗೆ ತುಂಬಿ ಹೆಚ್ಚಿನ ದರಕ್ಕೆ ಮಾರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆ: ಇದೇ ರೀತಿ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಿದ್ದ ಕೆ.ಆರ್.ಪುರದ ಕುಮಾರ ರಸ್ತೆಯ ‘ಇಲಾಹಿ ಟ್ರೇಡರ್ಸ್‌’ ಎಂಬ ಗೋದಾಮಿನ ಮೇಲೆ ದಾಳಿ ನಡೆಸಿದ ಕೆ.ಆರ್.ಪುರ ಪೊಲೀಸರು 20ಕ್ಕೂ ಹೆಚ್ಚು ಟನ್ ಕುಸುಬಲು ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಕೆ.ಆರ್.ಪುರದ ಮಹಮ್ಮದ್ ಇಕ್ಬಾಲ್ (53) ಮತ್ತು ತಮಿಳುನಾಡು ಮೂಲದ ರಾಮಮೂರ್ತಿ (45) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ

ರಾಮಮೂರ್ತಿ ತಮಿಳುನಾಡಿನ ನ್ಯಾಯಬೆಲೆ ಅಂಗಡಿಗಳಲ್ಲಿ ಕೆ.ಜಿ ಗೆ ಏಳು ರೂಪಾಯಿಯಂತೆ ಕುಸುಬಲು ಅಕ್ಕಿ ಖರೀದಿಸಿ, ಇಕ್ಬಾಲ್‌ಗೆ 10 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ನಂತರ ಇಕ್ಬಾಲ್ ಕುಸುಬಲು ಅಕ್ಕಿಗೆ ಪಾಲಿಷ್ ಹಾಕಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.