ಬೆಂಗಳೂರು: `ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ದಂಧೆಗಿಂತಲೂ ಹತ್ತುಪಟ್ಟು ದೊಡ್ಡದಾದ ಹಗರಣವೆಂದರೆ ಮರಳುದಂಧೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ ಪರಿಸರ ಸಂರಕ್ಷಿಸಲಾಗದು.
ಹಾಗಾಗಿ ಮರಳು ದಂಧೆಯನ್ನು ನಿಯಂತ್ರಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮವೊಂದನ್ನು ರೂಪಿಸಬೇಕು~ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.
ಭಾರತ ಯುವ ಕೇಂದ್ರವು ನಗರದ ಪುರಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣಾ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
`ನಗರದಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದ ಕೆಂಪೇಗೌಡರು ನೀರಿನ ಮಹತ್ವವನ್ನು ಅರಿತಿದ್ದರು. ಆದರೆ ಪ್ರಸ್ತುತ ಕೆರೆ ರಕ್ಷಿಸಬೇಕಾದ ಮಂದಿಯೇ ಕೆರೆಯನ್ನು ಭಕ್ಷಿಸುತ್ತಿದ್ದಾರೆ. ಅಸ್ತಿತ್ವದಲ್ಲಿರುವ ನೂರು ಕೆರೆಗಳ ರಕ್ಷಣೆಯೊಂದಿಗೆ ಒಂದು ಕೆರೆಯನ್ನು ನಿರ್ಮಾಣ ಮಾಡುವತ್ತ ಸರ್ಕಾರ ಯೋಜನೆ ಹಾಕಿಕೊಳ್ಳಬೇಕು~ ಎಂದು ಸಲಹೆ ನೀಡಿದರು. `ನೀರಿನ ಮೂಲಗಳೇ ಕಡಿಮೆ ಸಂಖ್ಯೆಯಲ್ಲಿರುವ ರಾಜಸ್ಥಾನದ ಭೂಮಿಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಅಲ್ಲಿನ ಸ್ವಯಸೇವಾ ಸಂಸ್ಥೆಗಳು ಜಲಕ್ರಾಂತಿಗೆ ಮುಂದಾಗಿವೆ. ರಾಜ್ಯದಾದ್ಯಂತ ಯಥೇಚ್ಛವಾಗಿರುವ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಬಗ್ಗೆ ಸಮಗ್ರ ಚಿಂತನೆ ನಡೆಸಬೇಕು~ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ಇದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರ್ಪಡಿಸುವ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.
ಸಾಲುಮರದ ತಿಮ್ಮಕ್ಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ ಅವರಿಗೆ `ಪರಿಸರ ಮಹಾರತ್ನ~ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಚಿವರಾದ ಎಸ್.ಸುರೇಶ್‌ಕುಮಾರ್, ಗೋವಿಂದ ಕಾರಜೋಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.