ಬೆಂಗಳೂರು: ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರಿಗೆ ಅಕ್ರಮವಾಗಿ `ಮ್ಯುಟೇಷನ್~ ಪಡೆಯಲು ಸಹಕರಿಸಿದ ಆರೋಪದ ಮೇಲೆ ರಾಮನಗರದ ಹಾಲಿ ಚುನಾವಣಾ ತಹಶೀಲ್ದಾರ್ ರಂಗನಾಥಯ್ಯ ಮತ್ತು ಯಶವಂತಪುರ ಹೋಬಳಿಯ ಕಂದಾಯ ನಿರೀಕ್ಷಕ ಸುರೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಇಬ್ಬರೂ ಆರೋಪಿಗಳನ್ನೂ ಬೆಳಿಗ್ಗೆಯೇ ಲೋಕಾಯುಕ್ತ ಕಚೇರಿಗೆ ಕರೆಸಿಕೊಂಡಿದ್ದ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್ ಮತ್ತು ಇನ್‌ಸ್ಪೆಕ್ಟರ್ ಅಂಜನ್‌ಕುಮಾರ್ ನೇತೃತ್ವದ ತಂಡ, ಮಧ್ಯಾಹ್ನದ ವೇಳೆಗೆ ಬಂಧಿಸಿತು. ಸಂಜೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ಸೋಮವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕೆರೆಗುಡ್ಡದಹಳ್ಳಿಯಲ್ಲಿ ಮುನಿರಾಜು ಭೂ ಕಬಳಿಕೆ ಮಾಡಿರುವ ಆರೋಪದ ಮೇಲೆ ಪುಟ್ಟಸ್ವಾಮಿ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿಗೆ ಸಂಬಂಧಿಸಿದ ತನಿಖೆಯಲ್ಲಿ ಲಭ್ಯವಾದ ಸಾಕ್ಷ್ಯಾಧಾರ ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣ ಮಹತ್ವದ ಘಟ್ಟ ತಲುಪಿದ್ದು, ಶಾಸಕರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗುವುದು ಖಚಿತವಾಗಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ತಮ್ಮ ಅತ್ತೆ ಮಲ್ಲಮ್ಮ ಎಂಬುವರಿಗೆ ಸೇರಿದ್ದ 1.15 ಎಕರೆ ಭೂಮಿಯನ್ನು ಮುನಿರಾಜು ಮತ್ತು ಇತರೆ ನಾಲ್ವರು ಸೇರಿ ಕಬಳಿಸಿದ್ದಾರೆ ಎಂದು ಆರೋಪಿಸಿ ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬುವರು ಕಳೆದ ಅಕ್ಟೋಬರ್ 31ರಂದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದರು.
ಕೆರೆಗುಡ್ಡದಹಳ್ಳಿಯಲ್ಲಿ ಮಲ್ಲಮ್ಮ ಅವರ ಹೆಸರಿನಲ್ಲಿದ್ದ 1.15 ಎಕರೆ ಭೂಮಿಯನ್ನು 1981ರಲ್ಲಿ `ನಗರ ಭೂಮಿತಿ ಕಾಯ್ದೆ~ ಅಡಿಯಲ್ಲಿ ರಾಜ್ಯ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಪುಟ್ಟಸ್ವಾಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಭೂಮಿಯನ್ನು ಮಲ್ಲಮ್ಮ ಅವರಿಗೆ ವಾಪಸ್ ನೀಡುವಂತೆ ಹೈಕೋರ್ಟ್ ವಿಭಾಗೀಯ ಪೀಠ 2007ರಲ್ಲಿ ಆದೇಶ ನೀಡಿತ್ತು. ಆದರೆ, ಕಂದಾಯ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದ ಮುನಿರಾಜು ಭೂಮಿಯ ಹಕ್ಕು ವರ್ಗಾವಣೆ ಆಗದಂತೆ ತಡೆದಿದ್ದರು. ನಂತರ ಆ ಆಸ್ತಿಯನ್ನು ಲಪಟಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಮಾರಿದ ಭೂಮಿಗೆ ಮತ್ತೆ ಹಕ್ಕು!:
ಮೂಲಗಳ ಪ್ರಕಾರ, 1995ರಲ್ಲಿ ಮುನಿರಾಜು 35 ಗುಂಟೆ ಭೂಮಿ ಖರೀದಿಸಿದ್ದಾರೆ. ಈ ಪೈಕಿ 14 ಗುಂಟೆ ಬೇರೊಬ್ಬರ ಸ್ವತ್ತಾದರೆ, 21 ಗುಂಟೆ ಅಸ್ತಿತ್ವದಲ್ಲೇ ಇರಲಿಲ್ಲ. 1997ರಲ್ಲಿ ಈ 35 ಗುಂಟೆಯನ್ನು ವಿಂಗಡಿಸಿ 30 ನಿವೇಶನಗಳನ್ನು ರಚಿಸಿರುವ ದಾಖಲೆ ಸೃಷ್ಟಿಸಿ, ಮಾರಾಟ ಮಾಡಿದ್ದಾರೆ.
ಆದರೆ, ಖರೀದಿಸಿದವರು ಖಾತೆ ವರ್ಗಾವಣೆ ಮಾಡಿಸಿಕೊಂಡಿರಲಿಲ್ಲ. 2008ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಮುನಿರಾಜು, ಮತ್ತೆ ಅದೇ 35 ಗುಂಟೆ ಭೂಮಿಯ ಮ್ಯುಟೇಷನ್ ದಾಖಲೆಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದರು.
ಆಗ ಯಶವಂತಪುರ ಹೋಬಳಿಯ ಕಂದಾಯ ನಿರೀಕ್ಷಕರ ಹುದ್ದೆಯಲ್ಲಿದ್ದ ರಮೇಶ್ ಈ ಬೇಡಿಕೆಯನ್ನು ನಿರಾಕರಿಸಿದ್ದರು. ನಂತರ ಈ ಹುದ್ದೆಗೆ ಬಂದ ಸುರೇಶ್ ಎದುರು ಮುನಿರಾಜು ಮತ್ತೊಂದು ಅರ್ಜಿ ಸಲ್ಲಿಸಿದರು.
ಅದನ್ನು ಮಾನ್ಯ ಮಾಡಿದ್ದ ಅವರು, ಸತ್ಯ ಸಂಗತಿಯನ್ನು ಮುಚ್ಚಿಟ್ಟು ಉಪ ವಿಭಾಗಾಧಿಕಾರಿಗೆ ಕಳುಹಿಸಿದ್ದರು. ಉಪ ವಿಭಾಗಾಧಿಕಾರಿಗಳಿಂದ ಕಡತ ವಾಪಸಾದ ಬಳಿಕ, ಅಕ್ರಮವಾಗಿ ಈ ಭೂಮಿಯ ಮ್ಯುಟೇಷನ್ ಅನ್ನು ಮುನಿರಾಜು ಅವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.