ADVERTISEMENT

ಅತ್ಯಂತ ನೋವಿನ ದಿನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 18:30 IST
Last Updated 8 ಜುಲೈ 2012, 18:30 IST

ಬೆಂಗಳೂರು: `ನನ್ನ ರಾಜಕೀಯ ಜೀವನದ ಅತ್ಯಂತ ನೋವಿನ ದಿನ ಇದು... ಅಧಿಕಾರದಿಂದ ಕೆಳಗಿಳಿಯಿರಿ ಎಂದು ನಿಮ್ಮಂಥ ನಿಷ್ಠಾವಂತರಿಗೆ ಹೇಳಬೇಕಾದ ದುಸ್ಥಿತಿ ನನ್ನ ಪಾಲಿಗೆ ಬಂದಿದೆ...~

ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಆಡಿದ ಬೇಸರದ ಮಾತು ಇದು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಬದಲಾವಣೆಗೆ ಬಿ.ಎಸ್. ಯಡಿಯೂರಪ್ಪ ಬಣ ಹೇರಿದ ಒತ್ತಡದ ಕಾರಣ ನವದೆಹಲಿಯಲ್ಲಿ ಶನಿವಾರ ಸಭೆ ಸೇರಿದ ಬಿಜೆಪಿ ಸಂಸದೀಯ ಮಂಡಳಿ, ಸದಾನಂದ ಗೌಡರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವ ನಿರ್ಧಾರ ಕೈಗೊಂಡಿತು.

ಈ ವಿಚಾರ ತಿಳಿಸಲು ಸದಾನಂದ ಗೌಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಂಸದೀಯ ಮಂಡಳಿಯ ಅಧ್ಯಕ್ಷರೂ ಆದ ಅಡ್ವಾಣಿ, `ನೀವು ಒಳ್ಳೆಯ ಆಡಳಿತ ನೀಡಿದ್ದೀರಿ. ನೀವು ನಿಷ್ಠಾವಂತರು ಎಂಬುದು ನನಗೆ ಗೊತ್ತಿದೆ. ಆದರೆ ಲಿಂಗಾಯತ ಸಮುದಾಯದ ಮತಗಳನ್ನು ಉಳಿಸಿಕೊಳ್ಳುವ ಒಂದೇ ಕಾರಣಕ್ಕಾಗಿ ಮುಖ್ಯಮಂತ್ರಿ ಸ್ಥಾನ ಬಿಡಿ ಎಂದು ಪಕ್ಷ ನಿಮ್ಮನ್ನು ಕೇಳುತ್ತಿದೆ~ ಎಂದು ಬೇಸರದಿಂದ ಹೇಳಿದರು.

`ಪಕ್ಷದ ಕರ್ನಾಟಕ ಘಟಕದಲ್ಲಿ ಏನು ನಡೆಯುತ್ತಿದೆ ಎಂಬುದು ನನಗೆ ಗೊತ್ತಿದೆ. ಪಕ್ಷಕ್ಕೆ ನಿಮ್ಮ ನಾಯಕತ್ವ ಬೇಕು. ನಿಮ್ಮ ಸೇವೆಯನ್ನು ಪಕ್ಷ ಸೂಕ್ತವಾಗಿ ಬಳಸಿಕೊಳ್ಳಲಿದೆ. ಯಾವುದಕ್ಕೂ ಬೇಸರ ಮಾಡಿಕೊಳ್ಳಬೇಡಿ, ಎದೆಗುಂದಬೇಡಿ. ನಿಮ್ಮ ಜೊತೆ ನಾನಿರುತ್ತೇನೆ~ ಎಂದು ಸದಾನಂದ ಗೌಡರಿಗೆ ಹೇಳಿದ ಅಡ್ವಾಣಿ ಅಕ್ಷರಶಃ ಕಣ್ಣೀರು ಹಾಕಿದರು ಎಂದು ಮೂಲಗಳು ತಿಳಿಸಿವೆ.

`ಸಿದ್ಧನಾಗೇ ಬಂದಿರುವೆ~: `ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ನಾನು ಸಿದ್ಧನಾಗಿಯೇ ಬಂದಿದ್ದೇನೆ. ಆದರೆ ಕೆಲವು ಸಂಗತಿಗಳನ್ನು ನಿಮಗೆ ತಿಳಿಸಬೇಕು. ಮುಕ್ತವಾಗಿ ಆಡಳಿತ ನಡೆಸಲು ಪಕ್ಷದ ಕೆಲವರು ಕಳೆದ 11 ತಿಂಗಳಲ್ಲಿ ಅವಕಾಶವನ್ನೇ ನೀಡಲಿಲ್ಲ~ ಎಂದು ಗೌಡರು ಅಡ್ವಾಣಿ ಅವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.