ADVERTISEMENT

ಅತ್ಯಾಚಾರ ಪ್ರಕರಣಗಳ ತನಿಖೆ ಶೀಘ್ರ ಪೂರ್ಣ

ಹೈಕೋರ್ಟ್‌ಗೆ ವರದಿ ಸಲ್ಲಿಸಿದ ಡಿಜಿಪಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಮತ್ತು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ವರದಿ ಸಲ್ಲಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಲಾಲ್ ರೋಕುಮ ಪಚಾವ್, `ಈ ಎಲ್ಲ ಪ್ರಕರಣಗಳ ತನಿಖೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದ್ದಾರೆ.

ಬೆಂಗಳೂರು ವಿವಿ `ಜ್ಞಾನಭಾರತಿ' ಆವರಣದಲ್ಲಿ ನೇಪಾಳ ಮೂಲದ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ವರದಿಯಾದ ನಂತರ, ವಿಜಯ ಕುಮಾರ್ ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅತ್ಯಾಚಾರ ಪ್ರಕರಣಗಳ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಡಿಜಿಪಿ ಅವರಿಗೆ ಆದೇಶ ನೀಡಿತ್ತು.

ಪಚಾವ್ ತಮ್ಮ ವರದಿಯಲ್ಲಿ ಜ್ಞಾನಭಾರತಿ, ಬಿಡದಿ ಹಾಗೂ ದಾಬಸ್‌ಪೇಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳ ಕುರಿತ ತನಿಖೆಯ ವಿವರ ನೀಡಿದ್ದಾರೆ. `ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಅವರು ವಿವರಿಸಿದ್ದಾರೆ.

`ಅತ್ಯಾಚಾರ ಪ್ರಕರಣಗಳು ಮರುಕಳಿಸದಂತೆ ತಡೆಯಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮಹಿಳೆಯರ ಮೇಲೆ ಆಗುವ ದೌರ್ಜನ್ಯ ತಡೆಗಟ್ಟುನ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ' ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.