ಬೆಂಗಳೂರು: ಜಾತಿ ಇಲ್ಲದ ಕಾರಣಕ್ಕೆ ಉದ್ಯೋಗಾವಕಾಶದಿಂದ ವಂಚಿತನಾಗಿದ್ದ ಅನಾಥ ಯುವಕ ರಘು ಅವರಿಗೆ ಕೊನೆಗೂ ಉದ್ಯೋಗ ಸಿಕ್ಕಿದೆ.
ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಮತ್ತು ಅತ್ಯಾಚಾರ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರು ರಘು ಅವರನ್ನು ತಮ್ಮ ಕಚೇರಿಯಲ್ಲಿ ಗುಮಾಸ್ತನನ್ನಾಗಿ ನೇಮಿಸಿಕೊಂಡಿದ್ದಾರೆ.
‘ನನಗೆ ಡಿ–ಗುಂಪಿನ ನೌಕರರನ್ನು ನೇರವಾಗಿ ನೇಮಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಕೆಲಸಕ್ಕಾಗಿ ಅಲೆಯುತ್ತಿದ್ದ ಹಾಗೂ ವಿದ್ಯಾಭ್ಯಾಸ ಮುಂದುವರಿಸುವ ಆಕಾಂಕ್ಷೆ ಹೊಂದಿದ್ದ ರಘು ಅವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದೇನೆ. ಅವರಿಗೆ ಮಾಸಿಕ ₹ 10,600 ಸಂಬಳ ನಿಡಲಾಗುವುದು’ ಎಂದು ಉಗ್ರಪ್ಪ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಜಾತಿ ಇಲ್ಲ ಎಂಬ ಕಾರಣಕ್ಕೆ ಜನ ರಘು ಅವರಿಗೆ ಉದ್ಯೋಗ ನಿರಾಕರಿಸುತ್ತಿದ್ದ ಬಗ್ಗೆ ಹಾಗೂ ಶಿಕ್ಷಣ ಮುಂದುವರಿಸಲು ಸಮಸ್ಯೆ ಆಗಿರುವ ಬಗ್ಗೆ ‘ಪ್ರಜಾವಾಣಿ’ 2015ರ ಡಿಸೆಂಬರ್ 17ರ ಸಂಚಿಕೆಯಲ್ಲಿ ‘ಜಾತಿ ಇಲ್ಲದವನಿಗೆ ಉದ್ಯೋಗವೂ ಇಲ್ಲ’ ಎಂಬ ವಿಶೇಷ ವರದಿಯನ್ನು ಪ್ರಕಟಿಸಿತ್ತು.
ರಘು ಅವರ ತಾಯಿ ಮಾತು ಬಾರದವರಾಗಿದ್ದು, ಭಿಕ್ಷಾಟನೆ ಮಾಡಿಕೊಂಡಿದ್ದರು. ಮಂಡ್ಯದಲ್ಲಿ ಆಕೆಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದರು. ಇದರಿಂದ ಗರ್ಭಿಣಿಯಾಗಿದ್ದ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಕೆಯ ಹಾಗೂ ಮಗುವಿನ (ರಘು) ಯೋಗಕ್ಷೇಮ ನೋಡಿಕೊಂಡಿತ್ತು.
‘ಉದ್ಯೋಗ ಸಿಕ್ಕಿದ್ದರಿಂದ ಖುಷಿ ಆಗಿದೆ. ನನ್ನ ವಿದ್ಯಾಭ್ಯಾಸ ಮುಂದುವರಿಸುವುದಕ್ಕೂ ಇದರಿಂದ ಅನುಕೂಲ ಆಗಲಿದೆ. ಉದ್ಯೋಗ ಕಲ್ಪಿಸಿದ ಉಗ್ರಪ್ಪ ಅವರಿಗೆ ಹಾಗೂ ಇದಕ್ಕೆ ನೆರವಾದ ಎಲ್ಲರಿಗೂ ಧನ್ಯವಾದಗಳು’ ಎಂದು ರಘು ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಿಕ್ಷಾಟನೆ ನಡೆಸುತ್ತಿದ್ದಾಗ ನನ್ನ ತಾಯಿ ಪರಿಶಿಷ್ಟರ ಕಾಲೋನಿಯಲ್ಲಿ ಉಳಿದುಕೊಳ್ಳುತ್ತಿದ್ದರು. ಹಾಗಾಗಿ ನನ್ನನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಹೋರಾಟವನ್ನು ಮುಂದುವರಿಸುತ್ತೇನೆ’ ಎಂದು ರಘು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.