ADVERTISEMENT

ಅನಿಲ ಟ್ಯಾಂಕರ್ ವಶಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 19:15 IST
Last Updated 3 ಮಾರ್ಚ್ 2012, 19:15 IST

ಬೆಂಗಳೂರು: ದಕ್ಷಿಣದ ರಾಜ್ಯಗಳಲ್ಲಿ ಎಲ್‌ಪಿಜಿ ಸಾಗಣೆ ಟ್ಯಾಂಕರ್‌ಗಳ ಮುಷ್ಕರದಿಂದ ಆಗಿರುವ ಸಮಸ್ಯೆ ನಿವಾರಣೆಗಾಗಿ ಈ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ತಕ್ಷಣ ಕಾರ್ಯಾಚರಣೆಗೆ ಇಳಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಸ್.ಜೈಪಾಲ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

ಎಲ್‌ಪಿಜಿ ಸಾಗಣೆ ದರ ಹೆಚ್ಚಳ ಮಾಡುವಂತೆ ಆಗ್ರಹಿಸಿ ಜನವರಿ 13ರಿಂದ ಟ್ಯಾಂಕರ್ ಮಾಲೀಕರು ಮುಷ್ಕರ ಆರಂಭಿಸಿದ್ದರು. ತೈಲ ಕಂಪೆನಿಗಳ ಜೊತೆಗಿನ ಮಾತುಕತೆ ಬಳಿಕ ಮುಷ್ಕರ ಸ್ಥಗಿತವಾಗಿತ್ತು. ಸಿಲಿಂಡರ್ ಪೂರೈಕೆ ಯಥಾಸ್ಥಿತಿಗೆ ಬರುವ ಮುನ್ನವೇ ಮತ್ತೆ ಮುಷ್ಕರ ಆರಂಭಿಸಿದ್ದಾರೆ. ಇದರಿಂದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅನಿಲ ಸಾಗಣೆ ವ್ಯವಸ್ಥೆಯ ಏಕಸ್ವಾಮ್ಯ ಸೃಷ್ಟಿಯಾಗಿದೆ. ಅದನ್ನು ಛಿದ್ರಗೊಳಿಸದೇ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ ಎಂದು ಅವರು ಗುರುವಾರ ಬರೆದಿರುವ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

`ಸದ್ಯ ಮೂರು ತೈಲ ಕಂಪೆನಿಗಳ ಅನಿಲ ಸಾಗಣೆಗಾಗಿ ನಿಯೋಜಿಸಲಾಗಿದ್ದ ನಾಲ್ಕು ಸಾವಿರ ಟ್ಯಾಂಕರ್‌ಗಳು ಸೇವೆಯನ್ನು ಸ್ಥಗಿತಗೊಳಿಸಿವೆ. ಈ ಸಂದರ್ಭದಲ್ಲಿ ಕಾಲಹರಣ ಮಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಈ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಬೇಕು. ಅವುಗಳನ್ನು ತೈಲ ಕಂಪೆನಿಗಳಿಂದ ಅನಿಲ ಸಾಗಿಸುವ ಕಾರ್ಯಕ್ಕೆ ತಕ್ಷಣ ನಿಯೋಜಿಸಬೇಕು~ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೋಟಾ ಹೆಚ್ಚಳಕ್ಕೆ ಆಗ್ರಹ:
ಶನಿವಾರ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ ರಾಜ್ಯ ಸಚಿವ ಕೆ.ವಿ.ಥಾಮಸ್ ಅವರಿಗೆ ಪತ್ರ ಬರೆದಿರುವ ಶೋಭಾ ಕರಂದ್ಲಾಜೆ ಅವರು, ರಾಜ್ಯಕ್ಕೆ ಪೂರೈಸುತ್ತಿರುವ ಸೀಮೆಎಣ್ಣೆಯ ಪ್ರಮಾಣವನ್ನು 65,000 ಕಿಲೋ ಲೀಟರ್‌ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

ಮೂರು ತೈಲ ಕಂಪೆನಿಗಳು ರಾಜ್ಯದಲ್ಲಿ 79.27 ಲಕ್ಷ ಎಲ್‌ಪಿಜಿ  ಸಂಪರ್ಕ ಒದಗಿಸಿದ್ದವು. ಆದರೆ, ವಿದ್ಯುತ್ ಸಂಪರ್ಕ ಸಂಖ್ಯೆಯ ಆಧಾರದಲ್ಲಿ ಪಡಿತರ ಚೀಟಿಗಳ ಪರಿಶೀಲನೆ ನಡೆಸಲಾಗಿದೆ. 24.35 ಲಕ್ಷ  ಪಡಿತರ ಚೀಟಿದಾರರು ಸಮರ್ಪಕ ದಾಖಲೆ ಒದಗಿಸಿಲ್ಲ. ಈ ಪೈಕಿ 20 ಲಕ್ಷ ಪಡಿತರ ಚೀಟಿಗಳ ಆಧಾರದಲ್ಲಿ ನೀಡಿದ್ದ ಅನಿಲ ಸಂಪರ್ಕಗಳನ್ನು ಈಗಾಗಲೇ ರದ್ದು ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಮಾಸಿಕ 100 ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ ಎಂದು ವಿವರಿಸಿದ್ದಾರೆ.

79.27 ಲಕ್ಷ ಅನಿಲ ಸಂಪರ್ಕಗಳಿದ್ದಾಗ ಮಾಸಿಕ 44,580 ಕಿಲೋ ಲೀಟರ್ ಸೀಮೆಎಣ್ಣೆ ಪೂರೈಸಲಾಗುತ್ತಿತ್ತು. ಈಗ 20 ಲಕ್ಷ ಅನಿಲ ಸಂಪರ್ಕ ರದ್ದಾದ ಬಳಿಕವೂ ಅದೇ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರಿಂದ ರಾಜ್ಯದ ಜನತೆಗೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪೂರೈಸುತ್ತಿರುವ ಸೀಮೆಎಣ್ಣೆಯ ಪ್ರಮಾಣವನ್ನು 65,000 ಕಿಲೋ ಲೀಟರ್‌ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.