ADVERTISEMENT

ಅಪಹೃತ ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 20:18 IST
Last Updated 19 ಮಾರ್ಚ್ 2018, 20:18 IST

ಬೆಂಗಳೂರು: ಸರ್ಜಾಪುರ ರಸ್ತೆ ಬಳಿಯ ನಿವಾಸಿಯಾದ 28 ವರ್ಷದ ಶಿಕ್ಷಕಿಯನ್ನು ಭಾನುವಾರ ರಾತ್ರಿ ಅಪಹರಿಸಿದ್ದ ದುಷ್ಕರ್ಮಿಗಳು, ಕಸವನಹಳ್ಳಿ ಬಳಿಯ ರಸ್ತೆ ಬದಿ ಸೋಮವಾರ ಬೆಳಿಗ್ಗೆ ಅವರನ್ನು ಬಿಟ್ಟು ಹೋಗಿದ್ದಾರೆ.

ತಾವು ವಾಸವಿದ್ದ ಅಪಾರ್ಟ್‌ಮೆಂಟ್ ಬಳಿ ರಾತ್ರಿ 9.15ರ ಸುಮಾರಿಗೆ ಶಿಕ್ಷಕಿ ನಡೆದುಕೊಂಡು ಹೋಗುತ್ತಿದ್ದರು. ಆಗ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಅಪಹರಣ ಮಾಡಿದ್ದರು. ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಶಿಕ್ಷಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಬಳಿಕ ಕಸವನಹಳ್ಳಿ ಬಳಿಯ ರಸ್ತೆ ಬದಿಯಲ್ಲಿ ಅವರನ್ನು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಅವರನ್ನು ಕಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಧಾವಿಸಿ ಅವರನ್ನು ಸೇಂಟ್
ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದೆವು’ ಎಂದು ಬೆಳ್ಳಂದೂರು ಪೊಲೀಸರು ಹೇಳಿದರು.

ADVERTISEMENT

ಅಪಹರಣ ನಡೆದ ವೇಳೆ  ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಯುವತಿಯನ್ನು ರಕ್ಷಿಸಿಲು ಯತ್ನಿಸಿದ್ದರು. ಆದರೂ ಅದು ಸಾಧ್ಯವಾಗಿರಲಿಲ್ಲ. ಆಗ ಸ್ಥಳಕ್ಕೆ ಬಂದ ಮತ್ತಿಬ್ಬರು ದುಷ್ಕರ್ಮಿಗಳ ಕಾರನ್ನು ಬೆನ್ನತ್ತಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ ಎಂದು ಅವರು ತಿಳಿಸಿದರು.

‘ಸಣ್ಣ ವಿಚಾರಕ್ಕೆ ಆಕೆ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋಗಿದ್ದಳು. ಮರುದಿನವೇ ಆಕೆ ಅಪಹರಣವಾಗಿದ್ದಳು’ ಎಂದು ಯುವತಿಯ ತಾಯಿ ಹೇಳಿಕೆ ಕೊಟ್ಟಿದ್ದಾರೆ. ಪಾದಚಾರಿಗಳು ನೀಡಿದ ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

‘ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಗೆ ಹೇಳಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಗುಣಮುಖರಾದ ಬಳಿಕ ಅವರಿಂದ ಹೇಳಿಕೆ ಪಡೆಯುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.