ADVERTISEMENT

ಅಭಿವೃದ್ಧಿಗೆ ಸರ್ಕಾರ ಬದ್ಧ: ಎಸ್. ಸುರೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು: ಅತ್ಯಂತ ಹಿಂದುಳಿದ ಹಾಗೂ ನಿರ್ಗತಿಕ ಸಮಾಜಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಕಟಿ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಭಾನುವಾರ ಇಲ್ಲಿ ಹೇಳಿದರು.

ಅಖಿಲ ಕರ್ನಾಟಕ ನಾಥಪಂಥಿ ರಾವಳ ಜೋಗಿ ಸಮಾಜ ಮಹಾಸಭಾ ಹಾಗೂ ಬೆಂಗಳೂರು ಜಿಲ್ಲಾ ಸಮಾಜದ ಮಹಾ ಸಭಾದ ಸಂಯುಕ್ತ ಆಶ್ರಯದಲ್ಲಿ ರಾಜಾಜಿನಗರದ ಡಾ.ರಾಜ್‌ಕುಮಾರ್ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಜಿಲ್ಲಾ ನಾಥಪಂಥಿ ರಾವಳ ಜೋಗಿ ಸಮಾಜ ಮಹಾಸಭಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಅತ್ಯಂತ ಹಿಂದುಳಿದ ಜಾತಿ- ಜನಾಂಗದವರು ತಮ್ಮಲ್ಲಿರುವ ಕೀಳರಿಮೆ ತೊರೆದು ಶೈಕ್ಷಣಿಕವಾಗಿ ಮುಂದೆ ಬರುವ ಮೂಲಕ ಬೇರೆ ಸಮಾಜಗಳಿಗೆ ಮಾದರಿ ಎನಿಸುವ ರೀತಿಯಲ್ಲಿ ಬೆಳೆಯಬೇಕು ಎಂದು ಸಲಹೆ ಮಾಡಿದ ಅವರು, `ನಾಥಪಂಥಿ ರಾವಳ ಜೋಗಿ ಸಮಾಜದ ಅಭಿವೃದ್ಧಿಗೆ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ~ ಎಂದು ಆಶ್ವಾಸನೆ ನೀಡಿದರು.

`ರಾಜ್ಯದಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿರುವ ನಾಥಪಂಥಿ ರಾವಳ ಜೋಗಿ ಸಮಾಜದವರು ತಾವು ಹಿಂದುಳಿದವರು ಎಂಬ ಭಾವನೆಯಿಂದ ಹೊರ ಬಂದು ಸಮಾಜದ ಮುಖ್ಯವಾಹಿನಿಗೆ ಸೇರಲು ಪ್ರಯತ್ನಿಸಬೇಕು. ಅದಕ್ಕೆ ಪೂರಕವಾದ ಬೆಂಬಲ, ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ~ ಎಂದರು.

ನಾಥಪಂಥಿ ರಾವಳ ಜೋಗಿ ಸಮಾಜಕ್ಕೆ ಅಗತ್ಯವಾದ ನಿವೇಶನ, ಶಿಕ್ಷಣ ಸಂಸ್ಥೆಗಳ ಪ್ರಾರಂಭ, ವಿದ್ಯಾರ್ಥಿ ನಿಲಯ ಸ್ಥಾಪನೆ ಮುಂತಾದ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಬಳಿ ಸಮಾಜದ ನಿಯೋಗ ಕೊಂಡೊಯ್ಯು ವುದಕ್ಕೆ ಅಗತ್ಯ ಸಹಕಾರ ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.

`ಅಹಿಂದ~ ಅಧ್ಯಕ್ಷ ಮುಕಡಪ್ಪ ಮಾತನಾಡಿ, ನಾಥಪಂಥಿ ರಾವಳ ಜೋಗಿ ಸಮಾಜವು ಪ್ರವರ್ಗ-1ಕ್ಕೆ ಸೇರಿದ್ದರೂ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜದ ಬೆಳವಣಿಗೆಗೆ ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ನಾಥಪಂಥಿ ರಾವಳ ಜೋಗಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಲೋ ರಾವಳ, ಗೌರವಾಧ್ಯಕ್ಷ ಎಚ್.ಡಿ. ನಾಗರಾಜ್, ಉಪಾಧ್ಯಕ್ಷ ಬಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಪು ಬಾವಲಿ, ಜಂಟಿ ಕಾರ್ಯದರ್ಶಿ ಸಿ. ಶಿವಕುಮಾರಸ್ವಾಮಿ, ಖಜಾಂಚಿ ಸಂಪತ್‌ಕುಮಾರ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.